ADVERTISEMENT

ಕೊಕ್ಕೊ: ಕುವೆಂಪು ವಿ.ವಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 19:46 IST
Last Updated 30 ಡಿಸೆಂಬರ್ 2019, 19:46 IST
ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್ ಆದ ಕುವೆಂಪು ವಿಶ್ವವಿದ್ಯಾಲಯ ತಂಡ
ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್ ಆದ ಕುವೆಂಪು ವಿಶ್ವವಿದ್ಯಾಲಯ ತಂಡ   

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳಿಂದ ನಡೆದ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಪಂದ್ಯಾವಳಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಮವಾರ ನಡೆದ ಫೈನಲ್ ಪಂದ್ಯಗಳಲ್ಲಿ ಕುವೆಂಪು ವಿಶ್ವವಿದ್ಯಾಲಯವು ಚಾಂಪಿಯನ್ ಆದರೆ, ಮಂಗಳೂರು ವಿಶ್ವವಿದ್ಯಾಲಯ ಎರಡನೇ ಸ್ಥಾನ ಪಡೆಯಿತು. ಪುಣೆಯ ಶಿವಾಜಿ ವಿಶ್ವವಿದ್ಯಾಲಯ ಮೂರನೇ ಸ್ಥಾನ ಗಳಿಸಿತು.

ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕುವೆಂಪು ವಿ.ವಿ ತಂಡದ ಆಟಗಾರ ನಾಗ ಸುಮಾರು 3.15 ನಿಮಿಷ ಎದುರಾಳಿ ತಂಡದ ಆಟಗಾರರ ಕೈಗೆ ಸಿಗದೆ ಆಟವಾಡಿದರು. ಎರಡನೇ ಇನಿಂಗ್ಸ್‌ನಲ್ಲಿ ಪವನ್ ಹಾಗೂ ದಿಲೀಪ್ ಹೆಚ್ಚು ಕಾಲಅಂಕಣದಲ್ಲಿ ಉಳಿದು ತಂಡದ ರಕ್ಷಣಾ ಗೋಡೆಯಾದರು.

ಮತ್ತೊಂದು ಕಡೆ ಮಂಗಳೂರು ವಿಶ್ವವಿದ್ಯಾಲಯ ತಂಡದ ಆಟಗಾರರು ಸಂಘಟಿತ ಹೋರಾಟ ಮಾಡಿ ಕುವೆಂಪು ವಿಶ್ವವಿದ್ಯಾಲಯ ತಂಡಕ್ಕೆ ಪ್ರಬಲವಾದ ಸ್ಪರ್ಧೆ ಒಡ್ಡಿದರು. ಮಂಗಳೂರು ವಿಶ್ವವಿದ್ಯಾಲಯ ತಂಡದ ಕೃಷ್ಣ ಪ್ರಸಾದ್, ಕಶ್ಯಪ್, ಮಹೇಶ್ ಮತ್ತು ಹಂಸರಾಜ್ ಉತ್ತಮ ಪ್ರದರ್ಶನ ನೀಡಿದರು.

ADVERTISEMENT

ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಕುವೆಂಪು ವಿಶ್ವವಿದ್ಯಾಲಯ ತಂಡ 8 ಅಂಕ, ಮಂಗಳೂರು ವಿಶ್ವವಿದ್ಯಾಲಯ 6 ಅಂಕಗಳನ್ನು ಪಡೆದುಕೊಂಡವು. ಎರಡನೇ ಇನಿಂಗ್ಸ್‌ನಲ್ಲಿ ಮೊದಲು ರೈಡಿಂಗ್‍ಗೆ ಇಳಿದ ಕುವೆಂಪು ವಿಶ್ವವಿದ್ಯಾಲಯ ತಂಡ ಮತ್ತೆ 8 ಅಂಕಗಳನ್ನು ಗಳಿಸಿತು.

ಮಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ಕುವೆಂಪುವಿಶ್ವವಿದ್ಯಾಲಯ ತಂಡ 11 ಅಂಕಗಳ ಗುರಿಯನ್ನು ನೀಡಿತು. ಆದರೆ, ಮಂಗಳೂರು ವಿಶ್ವವಿದ್ಯಾಲಯ 8 ಅಂಕಗಳನ್ನಷ್ಟೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.