ಬೆಂಗಳೂರು: ‘ಕಾಲೇಜು ದಿನಗಳಲ್ಲೇ ನಾನು ಬೆಂಗಳೂರು ಬುಲ್ಸ್ ತಂಡದ ಅಪ್ಪಟ ಅಭಿಮಾನಿ. ಅದೇ ತಂಡಕ್ಕೆ ಆಡುವ ಬಯಕೆಯಿತ್ತು. ಆದರೆ, ಆಕಸ್ಮಿಕವಾಗಿ ಯು.ಪಿ. ಯೋಧಾಸ್ ಕುಟುಂಬ ಸೇರಿದೆ. ಅಲ್ಲಿಯೂ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರಕಿದೆ. ಸತತ ಎಂಟು ಪಂದ್ಯಗಳಿಂದ ಅಜೇಯವಾಗಿರುವ ನಮ್ಮ ತಂಡವು ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ...’
ಇದು ಯು.ಪಿ. ಯೋಧಾಸ್ ತಂಡದ ಉದಯೋನ್ಮುಖ ರೇಡರ್, ಕನ್ನಡಿಗ ಗಗನ್ ಗೌಡ ಮಾತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಪ್ರತಿಭೆಯಾಗಿರುವ 21 ವರ್ಷ ವಯಸ್ಸಿನ ಗಗನ್, ಪ್ರಸ್ತುತ ಪ್ರೊ ಕಬಡ್ಡಿ ಲೀಗ್‌ನ 16 ಪಂದ್ಯಗಳಲ್ಲಿ 131 ಅಂಕ ಕಲೆಹಾಕಿ ಯಶಸ್ವಿ ರೇಡರ್ ಎನಿಸಿದ್ದಾರೆ. ಬೋನಸ್ ಕದಿಯುವುದರಲ್ಲಿ ನಿಸ್ಸೀಮನಾಗಿರುವ 6.4 ಅಡಿ ಎತ್ತರದ ಭರವಸೆಯ ಆಟಗಾರ, ಆರು ಬಾರಿ ‘ಸೂಪರ್ 10’ ಸಾಧನೆ ಮೆರೆದಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ನಿಮಗೆ ಕಬಡ್ಡಿ ಕ್ರೀಡೆಯಲ್ಲಿ ಆಸಕ್ತಿ ಬೆಳೆದಿದ್ದು ಹೇಗೆ?
ನನ್ನ ಸಹೋದರರು ಕಬಡ್ಡಿ ಆಟಗಾರರು. ಸ್ಥಳೀಯ ಟೂರ್ನಿಗಳಲ್ಲಿ ಅವರು ಆಡುವಾಗ ನೋಡಲು ನಾನು ಹೋಗುತ್ತಿದ್ದೆ. ಕ್ರಮೇಣ ನನಗೂ ಈ ಆಟದಲ್ಲಿ ಆಸಕ್ತಿ ಬೆಳೆಯಿತು. 13 ವರ್ಷ ವಯಸ್ಸಿನಲ್ಲಿ ಆಡಲು ಆರಂಭಿಸಿದೆ. ಪ್ರೌಢಶಾಲೆಯಲ್ಲಿದ್ದಾಗ ಜಿಲ್ಲಾ ಮಟ್ಟ, ರಾಜ್ಯ ಮಟ್ಟವನ್ನು ಪ್ರತಿನಿಧಿಸಿದೆ. ನಂತರ ಪಿಯುಸಿಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ನನ್ನ ಕ್ರೀಡಾಸಕ್ತಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಿತು.
ಯು.ಪಿ. ಯೋಧಾಸ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
ಎರಡು ವರ್ಷಗಳ ಹಿಂದೆ ಯುವ ಕಬಡ್ಡಿ ಸೀರಿಸ್‌ನಲ್ಲಿ ನಾನು ಹಂಪಿ ಹೀರೋಸ್ ತಂಡದಲ್ಲಿದ್ದೆ. ಅಲ್ಲಿ 23 ಪಂದ್ಯಗಳಲ್ಲಿ 262 ಪಾಯಿಂಟ್ಸ್ ಗಳಿಸಿದ್ದೆ. ಅದು ಎರಡನೇ ಗರಿಷ್ಠ ಸ್ಕೋರ್ ಆಗಿತ್ತು. ಅಲ್ಲಿ ನನ್ನ ಆಟವನ್ನು ಯೋಧಾಸ್ ತಂಡದವರು ನೋಡಿ, ಕಳೆದ ವರ್ಷ ತಂಡಕ್ಕೆ ಕರೆಸಿಕೊಂಡರು. ನಾನು ಬುಲ್ಸ್ ತಂಡಕ್ಕೆ ಆಡುವ ಕನಸು ಕಂಡವನು. ಅಲ್ಲಿ ಅವಕಾಶ ಸಿಗದಿದ್ದಾಗ ದೊರೆತ ಅವಕಾಶವನ್ನು ಬಳಸಿಕೊಂಡು, ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇನೆ.
ಯೋಧಾಸ್ ತಂಡದಲ್ಲಿ ಪ್ರೋತ್ಸಾಹ ಹೇಗಿದೆ?
ತಂಡದಲ್ಲಿ ಎಲ್ಲಾ ಆಟಗಾರರಿಗೂ ಪ್ರೋತ್ಸಾಹದ ವಾತಾವರಣವಿದೆ. ಕಳೆದ ಆವೃತ್ತಿಯಲ್ಲೇ ನಾನು 13 ಪಂದ್ಯಗಳಿಂದ 92 ಅಂಕ ಗಳಿಸಿ ತಂಡದ ವಿಶ್ವಾಸ ಗಳಿಸಿದ್ದೆ. ಪ್ರಮುಖ ಆಟಗಾರರು ಟೂರ್ನಿಯ ವೇಳೆ ಗಾಯಗೊಂಡ ಕಾರಣ ತಂಡವು 11ನೇ ಸ್ಥಾನ ಪಡೆಯಿತು. ಆದರೆ, ಈ ಬಾರಿ ಉತ್ತಮ ಸಂಯೋಜನೆಯಿಂದ ಕೂಡಿದೆ. ನಾನೂ ತಂಡದ ಶಿಬಿರದಲ್ಲಿ ಆರು ತಿಂಗಳು ತರಬೇತಿ ಪಡೆದೆ. ಹೀಗಾಗಿ ಆತ್ಮವಿಶ್ವಾಸ ವೃದ್ಧಿಯಾಗಿ ಈ ಬಾರಿ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ.
ಈ ಆವೃತ್ತಿಯಲ್ಲಿ ಯೋಧಾಸ್‌ಗೆ ಎಷ್ಟನೇ ಸ್ಥಾನ ನಿರೀಕ್ಷೆ ಮಾಡಬಹುದು?
ನಮ್ಮ ತಂಡವು ಗುಂಪು ಹಂತದ ಕೊನೆಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ (ತಂಡವು 21ರಲ್ಲಿ 12 ಪಂದ್ಯ ಗೆದ್ದು 74 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ). ಸತತ ಎಂಟು ಪಂದ್ಯಗಳಿಂದ ಅಜೇಯವಾಗಿದೆ. ಅಗ್ರಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ತಂಡವನ್ನೂ ಮಣಿಸಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗೆದ್ದು ಮೂರನೇ ಸ್ಥಾನಕ್ಕೇರಿದ್ದೇವೆ. ರೇಡಿಂಗ್, ಡಿಫೆಂಡಿಂಗ್ ಸೇರಿದಂತೆ ಎಲ್ಲಾ ವಿಭಾಗವು ಬಲಿಷ್ಠವಾಗಿರುವುದರಿಂದ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆ ನಮ್ಮದು.
ಪ್ರೊ ಕಬಡ್ಡಿ ಲೀಗ್ ಬಗ್ಗೆ ನಿಮ್ಮ ಅಭಿಪ್ರಾಯ?
ಪ್ರೊ ಕಬಡ್ಡಿ ಲೀಗ್ ಬಂದ ಬಳಿಕ ಕಬಡ್ಡಿ ಬಗ್ಗೆ ಜನರ ಮನಸ್ಥಿತಿ ಬದಲಾಗಿದೆ. ಆಟಗಾರರಿಗೂ ಸ್ಟಾರ್ ಪಟ್ಟ ದೊರೆಯುತ್ತಿದೆ. ಅಲ್ಲದೆ, ಸಾಕಷ್ಟು ಮಂದಿಗೆ ಇದರಿಂದ ಆದಾಯ, ಜೀವನ, ಉದ್ಯೋಗ ದೊರೆಯುತ್ತಿದೆ. ಇಲ್ಲಿ ಮಿಂಚಿದವರು ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುತ್ತಿದ್ದಾರೆ.
ಉದಯೋನ್ಮುಖ ಆಟಗಾರರಿಗೆ ನಿಮ್ಮ ಸಲಹೆಯೇನು?
ಪ್ರಯತ್ನ, ತ್ಯಾಗ, ಪರಿಶ್ರಮವಿಲ್ಲದೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಕಾಲೇಜು ಆಯ್ಕೆ ಮಾಡುವಾಗಲೂ ಯೋಚಿಸಬೇಕು. ಹೊರ ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಆಡಿದರೆ ಗಮನ ಸೆಳೆಯಬಹುದು. ಜೊತೆಗೆ ಫಿಟ್‌ನೆಸ್ ಮತ್ತು ಆಹಾರ ಶಿಸ್ತು ಕಾಪಾಡಿಕೊಳ್ಳಬೇಕು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.