ADVERTISEMENT

ಒಲಿಂಪಿಕ್ಸ್: ಕೋವಿಡ್‌ನಿಂದ ಗುಣಮುಖರಾದ ಅಥ್ಲೀಟ್‌ಗಳಿಗೆ ಲಸಿಕೆ ಪಡೆಯಲು ಐಒಎ ಸೂಚನೆ

ಪಿಟಿಐ
Published 6 ಜೂನ್ 2021, 13:16 IST
Last Updated 6 ಜೂನ್ 2021, 13:16 IST
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಕೋವಿಡ್‌ನಿಂದ ಚೇತರಿಸಿಕೊಂಡಿರುವ, ಒಲಿಂಪಿಕ್‌ ಅರ್ಹತೆ ಪಡೆದಿರುವ ಅಥ್ಲೀಟ್‌ಗಳಿಗೆ ಸಾಧ್ಯವಾದಷ್ಟು ಶೀಘ್ರ ಲಸಿಕೆಯ ಮೊದಲ ಡೋಸ್‌ ಪಡೆಯುವಂತೆ ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಸೂಚಿಸಿದೆ.

2018ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತೆ ಬಾಕ್ಸರ್‌ ಸಿಮ್ರನ್‌ಜೀತ್ ಕೌರ್‌ (60 ಕೆಜಿ ವಿಭಾಗ), ಶೂಟರ್‌ಗಳಾದ ಸೌರಭ್ ಚೌಧರಿ, ರಾಹಿ ಸರ್ನೋಬತ್‌, ದೀಪಕ್ ಕುಮಾರ್ ಹಾಗೂ ಮೈರಾಜ್ ಅಹಮದ್‌ ಖಾನ್‌ ಅವರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವವರು.

‘ಅಥ್ಲೀಟ್‌ಗಳಿಗೆ ಆದಷ್ಟು ತುರ್ತಾಗಿ ಮತ್ತು ಅಗತ್ಯವಾಗಿ ಲಸಿಕೆಯನ್ನು ನೀಡಲು ಬಾಕ್ಸಿಂಗ್ ಮತ್ತು ಶೂಟಿಂಗ್ ಫಡರೇಷನ್‌ಗಳಿಗೆ ವಿನಂತಿಸುತ್ತೇನೆ‘ ಎಂದು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಇತ್ತೀಚೆಗೆ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಸಿಮ್ರನ್‌ಜೀತ್‌ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದರು.

120 ಅಥ್ಲೀಟ್‌ಗಳು ಹಾಗೂ 27 ಪ್ಯಾರಾ ಅಥ್ಲೀಟ್‌ಗಳು ಇದುವರೆಗೆ ಕೋವಿಡ್‌ ಲಸಿಕೆಯ ಕನಿಷ್ಠ ಮೊದಲ ಡೋಸ್‌ ತೆಗದುಕೊಂಡಿದ್ದಾರೆ. ನಾಲ್ವರು ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ 62 ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಐಒಎ ತಿಳಿಸಿದೆ.

ಕೋಚ್‌ ಮತ್ತು ನೆರವು ಸಿಬ್ಬಂದಿಯ ಪೈಕಿ 114 ಮಂದಿ ಮೊದಲ ಡೋಸ್‌ ಹಾಗೂ 37 ಮಂದಿ ಎರಡೂ ಡೋಸ್‌ ಲಸಿಕೆ ತೆಗೆದುಕೊಂಡಿದ್ದಾರೆ.

ಲಸಿಕೆ ಪಡೆದದೇಶದ ಕ್ರೀಡಾಪಟುಗಳ ವಿವರಗಳನ್ನುಐಒಎ ಮೇ 27 ರೊಳಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಒದಗಿಸಬೇಕಿತ್ತು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ರಾಷ್ಟ್ರೀಯ ಫೆಡರೇಷನ್‌ಗಳಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.