ADVERTISEMENT

ಅಡ್‌ಹಾಕ್ ಸಮಿತಿ ವಿಸರ್ಜನೆ: ಡಬ್ಲ್ಯುಎಫ್ಐಗೆ ಅಧಿಕಾರ

ಇದು ಹೋರಾಟದ ಅಂತ್ಯ: ಸಂಜಯ್ ಸಿಂಗ್

ಪಿಟಿಐ
Published 18 ಮಾರ್ಚ್ 2024, 15:51 IST
Last Updated 18 ಮಾರ್ಚ್ 2024, 15:51 IST
ಸಂಜಯ್‌ ಸಿಂಗ್‌
ಸಂಜಯ್‌ ಸಿಂಗ್‌   

ನವದೆಹಲಿ:  ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಸೋಮವಾರ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಡ್‌ಹಾಕ್ ಸಮಿತಿಯನ್ನು ವಿಸರ್ಜಿಸಿದೆ. ಫೆಡರೇಷನ್ ಮೇಲಿನ ಅಮಾನತು ಹಿಂತೆಗೆದುಕೊಂಡ ನಂತರ ಸಮಿತಿಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಆ ಮೂಲಕ ಫೆಡರೇಷನ್‌ಗೆ ಆಡಳಿತಾತ್ಮಕ ಅಧಿಕಾರ ಮರಳಿ ದೊರೆತಂತಾಗಿದೆ.

ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ ಅರ್ಹತಾ ಪಂದ್ಯಾವಳಿಗೆ ಆಯ್ಕೆ ಟ್ರಯಲ್ಸ್ ಅನ್ನು ಡಬ್ಲ್ಯುಎಫ್‌ಐ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ನಡೆಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಐಒಎ ತಿಳಿಸಿದೆ.  

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ರೀಡಾ ಸಚಿವಾಲಯವು, ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್‌ಐ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ ಬಳಿಕ ಅಡ್‌ಹಾಕ್ ಸಮಿತಿ ರಚಿಸಲಾಗಿತ್ತು. ವಿಶ್ವ ಕುಸ್ತಿ ಸಂಸ್ಥೆಯಾದ ಯುಡಬ್ಲ್ಯುಡಬ್ಲ್ಯು (ವಿಶ್ವ ಕುಸ್ತಿ ಸಂಘಟನೆ) ಫೆಬ್ರುವರಿಯಲ್ಲಿ ಫೆಡರೇಷನ್‌ನ ಮೇಲಿನ ಅಮಾನತನ್ನು ವಾಪಸ್ ಪಡೆದಿತ್ತು.  

ADVERTISEMENT

ಅಮಾನತು ತೆರವು ಹಿನ್ನೆಲೆಯಲ್ಲಿ ಮತ್ತು  ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಐಒಎ ನೇಮಿಸಿದ ಅಡ್‌ಹಾಕ್‌ ಸಮಿತಿಯು ಆಯ್ಕೆ ಟ್ರಯಲ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆನ್ನಲ್ಲಿ ಸಮಿತಿಯನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಒಎ ಮಾರ್ಚ್ 10 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

‘ಡಬ್ಲ್ಯುಎಫ್ಐಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದಕ್ಕಾಗಿ ಐಒಎಗೆ ಧನ್ಯವಾದ ಅರ್ಪಿಸುತ್ತೇವೆ. ಕುಸ್ತಿಪಟುಗಳಿಗೆ ನಾವು ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ. ಶೀಘ್ರದಲ್ಲೇ ರಾಷ್ಟ್ರೀಯ ಶಿಬಿರ ಆಯೋಜಿಸುತ್ತೇವೆ. ಕುಸ್ತಿಪಟುಗಳು ವಿದೇಶದಲ್ಲಿ ತರಬೇತಿ ಪಡೆಯಲು ಬಯಸಿದರೆ ಅದಕ್ಕೂ ಅನುಕೂಲ ಮಾಡಿಕೊಡುತ್ತೇವೆ. ಈಗ ಒಲಿಂಪಿಕ್ಸ್ ಮೇಲೆ ಗಮನ ಹರಿಸಲಾಗಿದೆ. 5-6 ಕುಸ್ತಿಪಟುಗಳು ಅರ್ಹತೆ ಪಡೆಯುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಮತ್ತು ನಿಯಮಗಳ ಅನುಸರಣೆಯಂತಹ ಇತರ ಸಮಸ್ಯೆಗಳನ್ನು ಪರಿಹರಿಸಲು ‘ಸುರಕ್ಷತಾ ಸಮಿತಿ’ ನೇಮಿಸುವಂತೆ ಐಒಎ ಡಬ್ಲ್ಯುಎಫ್ಐಗೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.