ADVERTISEMENT

ಚೀನಾದೊಂದಿಗೆ ಪ್ರಾಯೋಕತ್ವ ಸಂಬಂಧ ಮುರಿಯಲು ಐಒಎ ಸಿದ್ಧ

ಮಹಾಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿಕೆ

ಪಿಟಿಐ
Published 18 ಜೂನ್ 2020, 16:07 IST
Last Updated 18 ಜೂನ್ 2020, 16:07 IST
ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಮಹಾಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ
ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಮಹಾಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ   

ನವದೆಹಲಿ: ಚೀನಾ ಮೂಲದ ಕಂಪೆನಿಗಳೊಂದಿಗಿನ ಪ್ರಾಯೋಜಕತ್ವ ಒಪ್ಪಂದಗಳನ್ನು ಮುರಿಯಲು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಸಿದ್ಧವಾಗಿದೆ ಎಂದು ಮಹಾಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ಸಂಘರ್ಷದಲ್ಲಿ ಭಾರತದ ಸೈನಿಕರು ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮೆಹ್ತಾ, ‘ನಾವು ಯಾವಾಗಲೂ ದೇಶದೊಂದಿಗೆ ಇದ್ದೇವೆ. ಟೋಕಿಯೊ ಒಲಿಂಪಿಕ್ಸ್‌ನವರೆಗೂ ಭಾರತ ತಂಡದ ಕಿಟ್ ಪ್ರಾಯೋಜಕತ್ವವನ್ನು ಚೀನಾದ ಲಿ ನಿಂಗ್ ಕಂಪೆನಿ ನೀಡಿದೆ. ಆದರೆ ನಮಗೆ ದೇಶ ಮೊದಲು. ಎಲ್ಲ ಸದಸ್ಯರೂ ಸೇರಿ ನಿರ್ಧಾರ ಮಾಡಿದರೆ ಒಪ್ಪಂದಗಳನ್ನು ಕೊನೆಗಾಣಿಸುತ್ತೇವೆ’ ಎಂದಿದ್ದಾರೆ.

ADVERTISEMENT

‘ಲಿ ನಿಂಗ್ ಜೊತೆಗಿನ ಒಪ್ಪಂದವನ್ನು ಐಒಎ ಮುರಿದುಕೊಳ್ಳಬೇಕು. ದೇಶದ ಜನರ ಭಾವನೆಗಳನ್ನು ಗೌರವಿಸಬೇಕು’ ಎಂದು ಐಒಎ ಖಜಾಂಚಿ ಆನಂದೇಶ್ವರ್ ಪಾಂಡೆ ಹೇಳಿದ್ದಾರೆ. ಅವರು ಮೆಹ್ತಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ಧಾರೆ.

ಐಒಎನಲ್ಲಿ ಅಧ್ಯಕ್ಷರು ಮತ್ತು ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಪ್ರತಿನಿಧಿಗಳು ಇದ್ದಾರೆ. ರಾಜ್ಯ ಒಲಿಂಪಿಕ್ ಸಂಸ್ಥೆಗಳ ಮುಖ್ಯಸ್ಥರು ಮತ್ತು ಕಾರ್ಯದರ್ಶಿಗಳೂ ಸದಸ್ಯರಾಗಿದ್ದಾರೆ.

2018ರ ಮೇನಲ್ಲಿ ಐಒಎ ಲಿ ನಿಂಗ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ ಭಾರತದ ಅಥ್ಲೀಟ್‌ಗಳಿಗೆ ಕಿಟ್‌ಗಳನ್ನು ಒದಗಿಸುತ್ತದೆ. ಅದರ ಒಟ್ಟು ಮೌಲ್ಯವು ಐದರಿಂದ ಆರು ಕೋಟಿ ರೂಪಾಯಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.