ADVERTISEMENT

₹ 200 ಕೋಟಿಗೂ ಅಧಿಕ ನೆರವು ನೀಡಿ: ಭಾರತ ಒಲಿಂಪಿಕ್‌ ಸಂಸ್ಥೆ ಮನವಿ

ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ ಐಒಎ; ಪ್ರಾಯೋಜಕತ್ವದ ಕೊರತೆ ಎದುರಿಸುತ್ತಿರುವ ಫೆಡರೇಷನ್‌ಗಳು

ಪಿಟಿಐ
Published 18 ಮೇ 2020, 4:53 IST
Last Updated 18 ಮೇ 2020, 4:53 IST
ನರಿಂದರ್‌ ಬಾತ್ರಾ
ನರಿಂದರ್‌ ಬಾತ್ರಾ   

ನವದೆಹಲಿ : ಕೋವಿಡ್‌–19 ಪಿಡುಗಿನಿಂದಾಗಿ ಕ್ರೀಡಾ ಫೆಡರೇಷನ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ₹200 ಕೋಟಿಗಿಂತಲೂ ಅಧಿಕ ನೆರವು ನೀಡುವಂತೆ ಭಾರತ ಒಲಿಂಪಿಕ್‌ ಸಂಸ್ಥೆಯು (ಐಒಎ) ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದೆ.

ಈ ಸಂಬಂಧ ಐಒಎ ಅಧ್ಯಕ್ಷ ನರಿಂದರ್‌ ಬಾತ್ರಾ ಅವರು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಭಾನುವಾರ ಪತ್ರ ಬರೆದಿದ್ದು, ಒಂದು ಬಾರಿಯ ಪರಿಹಾರ ರೂಪದಲ್ಲಿ ಈ ಹಣ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ.

‘ಕೊರೊನಾ ಬಿಕ್ಕಟ್ಟಿನಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಎಲ್ಲಾ ಕ್ರೀಡಾ ಫೆಡರೇಷನ್‌ಗಳು ಪ್ರಾಯೋಜಕತ್ವದ ಸಮಸ್ಯೆ ಎದುರಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಲಾಕ್‌ಡೌನ್‌ ನಂತರ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವುದು ಕಷ್ಟ’ ಎಂದು ಬಾತ್ರಾ, ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಐಒಎಗೆ ₹10 ಕೋಟಿ, ಒಲಿಂಪಿಕ್‌ ಸ್ಪೋರ್ಟ್ಸ್‌ನ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ತಲಾ ₹5 ಕೋಟಿ, ಒಲಿಂಪಿಕೇತರ ಕ್ರೀಡಾ ಫೆಡರೇಷನ್‌ಗಳಿಗೆ ತಲಾ ₹2.5 ಕೋಟಿ, ಎಲ್ಲಾ ರಾಜ್ಯ ಒಲಿಂಪಿಕ್ ಸಂಸ್ಥೆಗಳಿಗೆ ತಲಾ ₹1 ಕೋಟಿ ನೆರವು ನೀಡುವಂತೆ’ ಅವರು ಕೇಳಿಕೊಂಡಿದ್ದಾರೆ.

‘ಕೋವಿಡ್‌–19 ಪಿಡುಗಿನಿಂದಾಗಿ ಎಲ್ಲಾ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರಕ್ಕೂ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟಿದೆ. ಕ್ರೀಡಾ ಸಚಿವಾಲಯ ಬಿಡುಗಡೆ ಮಾಡುವ ಹಣ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಚಿವಾಲಯ ಬಯಸಿದರೆ, ಪರಿಹಾರದ ಹಣವನ್ನು ಯಾವ ಯಾವ ಕಾರ್ಯಕ್ಕೆ ವಿನಿಯೋಗಿಸಿದ್ದೇವೆ ಎಂಬುದರ ಕುರಿತು ಅಗತ್ಯ ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ’ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ಅಧ್ಯಕ್ಷರೂ ಆಗಿರುವ ಬಾತ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.