ADVERTISEMENT

ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ: ಇಶಾನ್‌, ಜೋಹನ್ನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 15:48 IST
Last Updated 14 ಜುಲೈ 2025, 15:48 IST
ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 11 ಮತ್ತು 13 ವರ್ಷದೊಳಗಿನವರ ವಿಭಾಗಗಳ ಸಿಂಗಲ್ಸ್‌ ಮತ್ತು ಡಬಲ್ಸ್‌ ಸ್ಪರ್ಧೆಗಳ ವಿಜೇತರು
ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 11 ಮತ್ತು 13 ವರ್ಷದೊಳಗಿನವರ ವಿಭಾಗಗಳ ಸಿಂಗಲ್ಸ್‌ ಮತ್ತು ಡಬಲ್ಸ್‌ ಸ್ಪರ್ಧೆಗಳ ವಿಜೇತರು   

ಬೆಂಗಳೂರು: ರಾಯಚೂರಿನ ಇಶಾನ್ ಪಾಠಕ್ ಮತ್ತು ಬೆಂಗಳೂರು ನಗರದ ಜೋಹನ್ನಾ ಅಹಿಲನ್ ಅವರು ಇಲ್ಲಿನ ಪೇಸ್ ಅಕಾಡೆಮಿಯಲ್ಲಿ ನಡೆದ ಯೋನೆಕ್ಸ್- ಸನ್‌ರೈಸ್ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.

ಇಶಾನ್‌ ಫೈನಲ್‌ನಲ್ಲಿ 21-15, 22-24, 22-20 ರಿಂದ ಆರನೇ ಶ್ರೇಯಾಂಕದ ದಕ್ಷ್‌ ಧೋತ್ರದ್ (ಬೆಂಗಳೂರು ನಗರ) ಅವರಿಗೆ ಆಘಾತ ನೀಡಿದರು. ಬಾಲಕಿಯರ ಪ್ರಶಸ್ತಿ ಸುತ್ತಿನಲ್ಲಿ ಜೋಹನ್ನಾ 13-21, 21-18, 21-12 ರಿಂದ ಅಗ್ರ ಶ್ರೇಯಾಂಕದ ಪುಣ್ಯಾ ಎಂ.ಎನ್‌ (ಬೆಂಗಳೂರು ನಗರ) ಅವರನ್ನು ಹಿಮ್ಮೆಟ್ಟಿಸಿದರು. 

ಬಾಲಕರ ಡಬಲ್ಸ್‌ನಲ್ಲಿ ರಾಯಚೂರಿನ ಇಶಾನ್ ಮತ್ತು ರೋಹನ್ ಕೆ. 23-21, 21-13ರಿಂದ ಬೆಂಗಳೂರು ನಗರದ ದಕ್ಷ್‌ ಮತ್ತು ಸಂಶ್ರೆ ಸುನಿಲ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿತು.

ADVERTISEMENT

ಬಾಲಕಿಯರ ಡಬಲ್ಸ್‌ನಲ್ಲಿ ಬೆಂಗಳೂರು ನಗರದ ಜೋಹನ್ನಾ ಮತ್ತು ಪುಣ್ಯಾ ಜೋಡಿಯು 17-21, 21-14, 21-10ರಿಂದ ಬೆಂಗಳೂರು ನಗರದ ದಕ್ಷಿತಾ ಮುಂಡ್ಲಾ ಮತ್ತು ಜನ್ಯಶ್ರೀ ಬಿ, ಜೋಡಿಯನ್ನು ಸೋಲಿಸಿ ಚಾಂಪಿಯನ್‌ ಆಯಿತು.

ಅಗಸ್ತ್ಯ ಚಾಂಪಿಯನ್‌: 11 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಬೆಂಗಳೂರು ನಗರದ ಅಗಸ್ತ್ರ ಎ. ಗೆದ್ದುಕೊಂಡರು. ಅವರು ಫೈನಲ್‌ನಲ್ಲಿ 21-17, 21-17ರಿಂದ ಬೆಂಗಳೂರು ಗ್ರಾಮಾಂತರದ ದಕ್ಷ್‌ ರಘುನಂದ ಅಯ್ಯಂಗಾರ್ ಅವರನ್ನು ಮಣಿಸಿದರು.

ಬಾಲಕಿಯ ಪ್ರಶಸ್ತಿ ಬೆಂಗಳೂರು ನಗರದ ಶ್ರೀಯಾ ಎ. ರಾವ್ ಪಾಲಾಯಿತು. ಅವರು ಪ್ರಶಸ್ತಿ ಸುತ್ತಿನಲ್ಲಿ 21-13, 21-18ರಿಂದ ಬೆಂಗಳೂರು ನಗರದ ಯಶೋನಿಧಿ ಟಿ. ಅವರನ್ನು ಸೋಲಿಸಿದರು. 

ಬೆಂಗಳೂರು ನಗರದ ನೀವ್ ಶುಶ್ರುತ್ ಮತ್ತು ಪ್ರಣವ್ ಎನ್‌. ಜೋಡಿ ಬಾಲಕರ ಡಬಲ್ಸ್‌ ಫೈನಲ್‌ನಲ್ಲಿ 21-9 21-6ರಿಂದ ಜೆ.ಪಿ. ಪಾರ್ಥಿವ್ ಸಾಮಾನ್ಯು ಮತ್ತು ಸೆಲ್ವಪ್ರಾಣೇಶ್ ಸೆಲ್ವಪ್ರಭು ವಿರುದ್ಧ ಗೆದ್ದಿತು.

ಬಾಲಕಿಯರ ಡಬಲ್ಸ್‌ ಪ್ರಶಸ್ತಿ ಸುತ್ತಿನಲ್ಲಿ ಬೆಂಗಳೂರು ನಗರದ ನಿಹಾರಿಕಾ ರಾಜ್‌ ಮತ್ತು ಶ್ರೀಯಾ 21-13, 22-20ರಿಂದ ಕ್ರಿಶಾ ಸಿಂಘದೇವ್ ಮತ್ತು ಖುಷಿ ಆರ್. ಅವರನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.