ADVERTISEMENT

ಶೂಟಿಂಗ್‌: ಮತ್ತೆ ಮೂವರಿಗೆ ಒಲಿಂಪಿಕ್ಸ್ ಟಿಕೆಟ್‌

ಪಿಟಿಐ
Published 10 ನವೆಂಬರ್ 2019, 17:55 IST
Last Updated 10 ನವೆಂಬರ್ 2019, 17:55 IST
ಅಂಗದ್‌ ವೀರ್‌ ಸಿಂಗ್‌ ಬಜ್ವಾ
ಅಂಗದ್‌ ವೀರ್‌ ಸಿಂಗ್‌ ಬಜ್ವಾ   

ದೋಹಾ: ಹದಿವಯಸ್ಸಿನ ಐಶ್ವರಿ ಪ್ರತಾಪ್‌ ಸಿಂಗ್ ತೋಮಾರ್‌,ಅಂಗದ್‌ ವೀರ್‌ ಸಿಂಗ್‌ ಬಜ್ವಾ ಮತ್ತು ಮೈರಾಜ್‌ ಅಹಮದ್‌ ಖಾನ್‌, ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ತಮ್ಮ ತಮ್ಮ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದರು.

ಇದರೊಂದಿಗೆ ಭಾರತದ ಕೋಟಾದಡಿ 15 ಮಂದಿ ಶೂಟಿಂಗ್‌ ಸ್ಪರ್ಧಿಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಂತಾಗಿದೆ. ಇದು ಈವರೆಗಿನ ಗರಿಷ್ಠ ಸಂಖ್ಯೆ ಎನಿಸಿತು.2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ 11 ಮಂದಿ, 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ಗೆ 12 ಮಂದಿ ಅರ್ಹತೆ ಪಡೆದಿದ್ದರು.

ಲುಸೇಲ್‌ ಶೂಟಿಂಗ್‌ ಕಾಂಪ್ಲೆಕ್ಸ್‌ನಲ್ಲಿ ನಡೆದಸ್ಕೀಟ್‌ ಸ್ಪರ್ಧೆಯಲ್ಲಿ ಅಂಗದ್ ವೀರ್‌ ಮತ್ತು ಮೈರಾಜ್‌ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು. ಇಬ್ಬರೂ 56 ಸ್ಕೋರ್‌ನೊಡನೆ ಮೊದಲ ಸ್ಥಾನಕ್ಕೆ ಟೈ ಮಾಡಿಕೊಂಡಿದ್ದರು. ಶೂಟ್‌ ಆಫ್‌ನಲ್ಲಿ ಸ್ಥಾನ ನಿರ್ಧಾರವಾಯಿತು. ಕುವೈಟ್‌ನ ಹಬೀಬ್‌ ಸಾದ್ ಕಂಚಿನ ಪದಕದೊಡನೆ ಮೂರನೇ ಕೋಟಾದಡಿ ಟೋಕಿಯೊ ಕೂಟಕ್ಕೆ ಅರ್ಹತೆ ಪಡೆದರು.

ADVERTISEMENT

18 ವರ್ಷದ ಐಶ್ವರಿ ಪ್ರತಾಪ್‌, 50 ಮೀ. ರೈಫಲ್‌ 3 ಪೊಸಿಷನ್ಸ್‌ನಲ್ಲಿ ಫೈನಲ್‌ನಲ್ಲಿ ಮೂರನೇ ಸ್ಥಾನದೊಡನೆ (449.1 ಅಂಕ) ಕಂಚಿನ ಪದಕ ಕೊರಳಿಗೆ ಹಾಕಿಕೊಂಡರು. ಕೊರಿಯಾದ ಕಿಮ್‌ ಜೊಂಗ್‌ಹ್ಯುನ್‌ (459.9) ಮತ್ತು ಚೀನಾದ ಝೊಂಗ್‌ಹಾವೊ ಝಾವೊ (459.1) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು.

ಮಧ್ಯಪ್ರದೇಶದ ರತನ್‌ಪುರ್ ಗ್ರಾಮದ ಕೃಷಿಕ ಕುಟುಂಬದಿಂದ ಬಂದ ಐಶ್ವರಿ ಪ್ರತಾಪ್‌ ಕಳೆದ ಜುಲೈನಲ್ಲಿ ಜರ್ಮನಿಯ ಸುಹ್ಲ್‌ನಲ್ಲಿ ನಡೆದ ಜೂನಿಯರ್‌ ವಿಶ್ವ ಕಪ್‌ನ ಪುರುಷರ ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಹಾದಿಯಲ್ಲಿ ವಿಶ್ವ ದಾಖಲೆ ಸ್ಥಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.