ADVERTISEMENT

TCS World 10K: ಚೆಪ್ಟೆಗಿ ಮೇಲೆ ಹೆಚ್ಚಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 16:11 IST
Last Updated 25 ಏಪ್ರಿಲ್ 2025, 16:11 IST
<div class="paragraphs"><p>ದೂರ ಅಂತರದ ಓಟಗಾರರಾದ ಯುಗಾಂಡಾದ ಜೋಷುವಾ ಚೆಪ್ಟೆಗಿ, ಕೆನ್ಯಾದ ಸಿಂಥಿಯಾ ಚೆಪ್ಗನೊ ಮತ್ತು ತಾಂಜಾನಿಯಾದ&nbsp;ಜೆರಾಲ್ಡ್ ಗೇ ಶುಕ್ರವಾರ ಮಾಧ್ಯಮ ಸಂವಾದಲ್ಲಿ ಪಾಲ್ಗೊಂಡರು </p></div>

ದೂರ ಅಂತರದ ಓಟಗಾರರಾದ ಯುಗಾಂಡಾದ ಜೋಷುವಾ ಚೆಪ್ಟೆಗಿ, ಕೆನ್ಯಾದ ಸಿಂಥಿಯಾ ಚೆಪ್ಗನೊ ಮತ್ತು ತಾಂಜಾನಿಯಾದ ಜೆರಾಲ್ಡ್ ಗೇ ಶುಕ್ರವಾರ ಮಾಧ್ಯಮ ಸಂವಾದಲ್ಲಿ ಪಾಲ್ಗೊಂಡರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘2014ರಲ್ಲಿ ಬೆಳ್ಳಿ ಪದಕದೊಂದಿಗೆ ಬೆಂಗಳೂರಿನಲ್ಲೇ ಅಂತರರಾಷ್ಟ್ರೀಯ ಪಯಣ ಆರಂಭಿಸಿದ್ದೆ. 11 ವರ್ಷಗಳಲ್ಲಿ ಒಲಿಂಪಿಕ್ಸ್‌ ‍ಪದಕಗಳು ಸೇರಿದಂತೆ ಹಲವು ಪ್ರಶಸ್ತಿ ಗೆದ್ದಿದ್ದೇನೆ. ಇದೀಗ ಟಿಸಿಎಸ್‌ ವಿಶ್ವ 10ಕೆ ಓಟದಲ್ಲಿ ಚಿನ್ನದ ಗುರಿಯೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದ್ದೇನೆ’ ಎಂದು ಯುಗಾಂಡಾದ ದೂರ ಅಂತರದ ಓಟಗಾರ ಜೋಷುವಾ ಚೆಪ್ಟೆಗಿ ಹೇಳಿದರು.

ADVERTISEMENT

ಭಾನುವಾರ ಮುಂಜಾನೆ ನಡೆಯಲಿರುವ 10ಕೆ ಓಟಕ್ಕೆ ಸಿಲಿಕಾನ್‌ ಸಿಟಿ ಸಜ್ಜಾಗಿದೆ. ಸ್ಪರ್ಧೆಗೆ ಕಾವು ಹೆಚ್ಚಿಸುವಂತೆ ಯುಗಾಂಡಾ, ಕೆನ್ಯಾ, ನಾರ್ವೆ, ಇಥಿಯೋಪಿಯಾ, ತಾಂಜಾನಿಯಾ ಸೇರಿದಂತೆ ಹಲವು ರಾಷ್ಟ್ರಗಳ ಖ್ಯಾತನಾಮ ಅಥ್ಲೀಟ್‌ಗಳು ಬಂದಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 10 ಸಾವಿರ ಮೀ. ಓಟದಲ್ಲಿ ಚಿನ್ನ, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 5 ಸಾವಿರ ಮೀಟರ್‌ನಲ್ಲಿ ಚಿನ್ನ ಮತ್ತು 10 ಸಾವಿರ ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿರುವ 28 ವರ್ಷ ವಯಸ್ಸಿನ ಚೆಪ್ಟೆಗಿ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಪುರುಷರ ವಿಭಾಗದ ಕೂಟ ದಾಖಲೆ ಕೆನ್ಯಾದ ನಿಕೋಲಸ್ ಕಿಮೆಲಿ ಹೆಸರಿನಲ್ಲಿದೆ. 2022ರಲ್ಲಿ ಅವರು 27 ನಿಮಿಷ 38 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಚೆಪ್ಟೆಗಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯು 26 ನಿಮಿಷ 11 ಸೆಕೆಂಡ್‌ ಇದ್ದು, ಕೂಟ ದಾಖಲೆ ಮುರಿಯುವ ಸಾಧ್ಯತೆ ಹೆಚ್ಚಿದೆ.

ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಗೆಲುವಿನೊಡನೆ ಬೆಂಗಳೂರಿಂದ ನಿರ್ಗಮಿಸುವುದು ನನ್ನ ಆದ್ಯತೆ. ದಾಖಲೆ ನಿರ್ಮಿಸುವ ಬಗ್ಗೆ ಈಗಲೇ ಖಚಿತವಾಗಿ ಹೇಳಲಾರೆ. ಪ್ರಸ್ತುತ ಮ್ಯಾರಥಾನ್‌ಗಳಿಗೆ ಹೆಚ್ಚು ತಯಾರಿ ನಡೆಸಿದ್ದು, ಹೀಗಾಗಿ 10ಕೆ ಓಟದಲ್ಲಿ ವೇಗವಾಗಿ ಗುರಿ ಮುಟ್ಟುವುದು ಸ್ವಲ್ಪ ಕಷ್ಟವಾಗಬಹುದು’ ಎಂದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ಚೆಪ್ಟೆಗಿ ತಿಳಿಸಿದರು. 

‌ಕೆನ್ಯಾದ ವಿನ್ಸೆಂಟ್ ಲ್ಯಾಂಗಟ್, ಯುಗಾಂಡಾದ ಸ್ಟೀಫನ್ ಕಿಸ್ಸಾ, ನಾರ್ವೆಯ ಅವೆಟ್ ನಫ್ಟಾಲೆಮ್ ಕಿಬ್ರಾಬ್, ಇಥಿಯೋಪಿಯಾದ ಜೆನ್ಬೆರು ಸಿಸೆ, ತಾಂಜಾನಿಯಾದ ಜೆರಾಲ್ಡ್ ಗೇ ಅವರು ಪುರುಷರ ವಿಭಾಗದ ಪ್ರಶಸ್ತಿಗಾಗಿ ಚೆಪ್ಟೆಗಿ ಅವರಿಗೆ ಸವಾಲೊಡ್ಡುವ ನಿರೀಕ್ಷೆಯಿದೆ.

ಮಹಿಳೆಯರ ವಿಭಾಗದಲ್ಲೂ ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿದ್ದಾರೆ. ಕೆನ್ಯಾದ ದೂರ ಅಂತರದ ಓಟಗಾರ್ತಿ ಸಿಂಥಿಯಾ ಚೆಪ್ಗನೊ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. 2022ರಲ್ಲಿ ಅವರದೇ ದೇಶದ ಐರಿನ್ ಚೆಪ್ಟೈ (30ನಿ.35ಸೆ) ಸ್ಥಾಪಿಸಿದ್ದ ಕೂಟ ದಾಖಲೆಗಿಂತ (30ನಿ.08) ಅತ್ಯುತ್ತಮ ವೈಯಕ್ತಿಕ ಸಾಧನೆ ಹೊಂದಿರುವ ಸಿಂಥಿಯಾ ಓಟದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

‘ಸಹ ಸ್ಪರ್ಧಿಗಳೊಂದಿಗೆ ಉತ್ತಮ ರೇಸ್‌ಗೆ ಉತ್ಸುಕಳಾಗಿದ್ದೇನೆ. ಪೋಡಿಯಂ ಫಿನಿಷ್‌ ಮಾಡುವತ್ತ ಚಿತ್ತ ಹರಿಸಿದ್ದೇನೆ’ ಎಂದು 24 ವರ್ಷ ವಯಸ್ಸಿನ ಸಿಂಥಿಯಾ ತಿಳಿಸಿದರು.‌

ರೇಸ್ ವಿಭಾಗ;ಆರಂಭ (ಬೆಳಿಗ್ಗೆ)

ವಿಶ್ವ 10ಕೆ ಮಹಿಳೆಯರು;5.30

ವಿಶ್ವ 10ಕೆ ಪುರುಷರು;6.08

ಓಪನ್ 10ಕೆ;6.10

ಚಾಂಪಿಯನ್ಸ್‌, ಅಂಗವಿಕಲರು (3 ಕಿ.ಮೀ);8.00

ಹಿರಿಯ ನಾಗರಿಕರು (3 ಕಿ.ಮೀ);8.10

ಮಜಾ ರನ್ (4.2 ಕಿಮೀ);8.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.