ADVERTISEMENT

Tokyo Olympics: ಹೊನಲು ಬೆಳಕಿನಲ್ಲಿ ಬೆಳಗಿದ ಜೇಕಬ್‌

ರಾಯಿಟರ್ಸ್
Published 1 ಆಗಸ್ಟ್ 2021, 22:20 IST
Last Updated 1 ಆಗಸ್ಟ್ 2021, 22:20 IST
ಗಾಂಗ್‌ ಲಿಜಿಯಾವೊ –ರಾಯಿಟರ್ಸ್ ಚಿತ್ರ
ಗಾಂಗ್‌ ಲಿಜಿಯಾವೊ –ರಾಯಿಟರ್ಸ್ ಚಿತ್ರ   

ಟೋಕಿಯೊ: ಬೆಳಕು–ನೆರಳಿನಾಟದಲ್ಲಿ ರಂಗವೇದಿಕೆಯಂತೆ ಗೋಚರವಾದ ಒಲಿಂಪಿಕ್ ಕ್ರೀಡಾಂಗಣದ ಟ್ರ್ಯಾಕ್‌ನಲ್ಲೂ ನಾಟಕೀಯ ಫಲಿತಾಂಶ ಹೊರಬಿದ್ದಿತು. ಸ್ಪ್ರಿಂಟ್ ಮಿಂಚು ಉಸೇನ್ ಬೋಲ್ಟ್ ನಂತರ 100 ಮೀಟರ್ ಓಟದ ರಾಜ ಯಾರು ಎಂಬ ಕುತೂಹಲಕ್ಕೆ ಕೊನೆ ಹಾಡಿದ ಇಟಲಿಯ ಲ್ಯಾಮಂಟ್ ಮಾರ್ಸೆಲ್ ಜೇಕಬ್ ಚಿನ್ನಕ್ಕೆ ಮುತ್ತಿಟ್ಟು ಸಂಭ್ರಮಿಸಿದರು.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಜೇಕಬ್ಸ್‌ 9.80 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಒಲಿಂಪಿಕ್ ಚಾಂಪಿಯನ್‌ ಆಗುವುದರ ಜೊತೆಯಲ್ಲಿ 26 ವರ್ಷದ ಈ ಸ್ಪ್ರಿಂಟರ್‌ ಯುರೋಪ್‌ನ ಹೊಸ ದಾಖಲೆಯನ್ನೂ ಬರೆದರು. ಅಮೆರಿಕದ ಫ್ರೆಡ್ ಕಾರ್ಲಿ 9.84 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗಳಿಸಿದರು. ಕಂಚಿನ ಪದಕ ಕೆನಡಾದ ಆ್ಯಂಡ್ರೆ ಡಿ ಗ್ರಸಿ (9.89) ಪಾಲಾಯಿತು. 2016ರ ರಿಯೊ ಒಲಿಂಪಿಕ್ಸ್‌ನಲ್ಲೂ ಅವರು ಕಂಚಿನ ಪದಕ ಗೆದ್ದಿದ್ದರು.

ಕ್ರೀಡಾಂಗಣದ ಹೊನಲು ಬೆಳಕನ್ನು ನಂದಿಸಿ 12 ಪ್ರಾಜೆಕ್ಟರ್‌ಗಳಲ್ಲಿ ಜಗತ್ತಿನ ತ್ರಿ–ಡಿ ಚಿತ್ರಗಳನ್ನು ಟೋಕಿಯೊದ ಆಗಸದತ್ತ ಬಿಂಬಿಸಿ, ಅದರ ಬೆನ್ನಲ್ಲೇ ಅಥ್ಲೀಟ್‌ಗಳನ್ನು ಪರಿಚಯಿಸಲಾಗಿತ್ತು. ನಂತರ ಹೊನಲು ಬೆಳಕನ್ನು ಚೆಲ್ಲಲಾಯಿತು.

ADVERTISEMENT

ಅಮೆರಿಕದಲ್ಲಿ ಜನಿಸಿದ ಜೇಕಬ್ ಲೇನ್‌ ಮೂರರಲ್ಲಿ ಸಜ್ಜಾಗಿದ್ದರು. ಅತ್ಯುತ್ತಮ ಆರಂಭ ಕಂಡ ಅವರು ಅದೇ ಲಯವನ್ನು ಉಳಿಸಿಕೊಂಡು ಮುನ್ನುಗ್ಗಿದರು. ಅಮೆರಿಕ, ಕೆನಡಾ ಮತ್ತು ದಕ್ಷಿಣ ಆಫ್ರಿಕಾ ಅಥ್ಲೀಟ್‌ಗಳು ಕೂಡ ಚಿನ್ನದ ಕನಸು ಹೊತ್ತುಕೊಂಡು ಮುಂದೆ ಸಾಗಿದರು. ಆದರೆ ಅಂತಿಮ ಗೆರೆಯನ್ನು ಮೊದಲು ತಲುಪಿದವರು ಜೇಕಬ್ಸ್‌. ಸ್ವಲ್ಪ ಮೊದಲು ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಇಟಲಿಯ ಗ್ಯಾನ್‌ಮಾರ್ಕೊ ತಂಬೆರಿ ಅಲ್ಲಿ ಜೇಕಬ್ಸ್‌ ಅವರನ್ನು ಅಪ್ಪಿ ಹಿಡಿದರು. ಇಬ್ಬರ ಸಂಭ್ರಮ ಮುಗಿಲೆತ್ತರಕ್ಕೆ ಏರಿತು.

2004ರಿಂದ ಒಲಿಂಪಕ್ಸ್‌ನ 100 ಮತ್ತು 200 ಮೀಟರ್ಸ್ ಓಟದ ಟ್ರ್ಯಾಕ್‌ನಲ್ಲಿ ಜಮೈಕಾದ ಉಸೇನ್ ಬೋಲ್ಟ್ ಅವರೇ ಮಿಂಚಿದ್ದರು. ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದ ಅವರು ನಿವೃತ್ತರಾದ ನಂತರ ನಡೆಯುತ್ತಿರುವ ಮೊದಲ ಒಲಿಂಪಿಕ್ಸ್ ಇದು.

ಜಮೈಕಾದವರು ಇಲ್ಲದ ಟ್ರ್ಯಾಕ್‌

2000ರ ಸಿಡ್ನಿ ಒಲಿಂಪಿಕ್ಸ್ ನಂತರ ಇದೇ ಮೊದಲ ಬಾರಿ ಜಮೈಕಾದ ಅಥ್ಲೀಟ್‌ಗಳಿಲ್ಲದೆ 100 ಮೀಟರ್ಸ ಓಟದ ಸ್ಪರ್ಧೆ ನಡೆಯಿತು. ಉಸೇನ್ ಬೋಲ್ಟ್ ಅವರ ಬಹುಕಾಲದ ಗೆಳೆಯ ಯೊಹಾನ್ ಬ್ಲೇಕ್‌ ಸೆಮಿಫೈನಲ್‌ನಲ್ಲಿ ಅನರ್ಹಗೊಂಡಿದ್ದರು. ಜೇಕಬ್ಸ್ ಒಳಗೊಂಡಂತೆ, ಟ್ರ್ಯಾಕ್‌ನಲ್ಲಿ ಹೊಸಮುಖಗಳೇ ಹೆಚ್ಚು ಗೋಚರಿಸಿದ್ದವು. ‌

ಸ್ಪರ್ಧೆಯ ವಿಜೇತರ ವಿವರ

ಅಥ್ಲೀಟ್‌;ಪದಕ;ಕಾಲ;ಲೇನ್‌

ಜೇಕಬ್ಸ್‌;ಚಿನ್ನ;9.80ಸೆ;3

ಫ್ರೆಡ್‌ ಕಾರ್ಲಿ;ಬೆಳ್ಳಿ;9.84ಸೆ;5

ಆ್ಯಂಡ್ರೆ ಗ್ರಸಿ;ಕಂಚು;9.89ಸೆ;9

ಚಿನ್ನ ಗೆದ್ದ ಚೀನಾದ ಗಾಂಗ್‌

ಮಹಿಳೆಯರ ಶಾಟ್‌ಪಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಗಾಂಗ್‌ ಲಿಜಿಯಾವೊ ಅವರು ಚೀನಾಗೆ ಚಿನ್ನ ಗೆದ್ದುಕೊಟ್ಟರು. ಬಿಸಿಲ ಝಳದಲ್ಲಿ ಬೆಳಿಗ್ಗೆ ನಡೆದ ಫೈನಲ್‌ನಲ್ಲಿ ಅವರು20.58 ಮೀಟರ್ಸ್ ದೂರ ಎಸೆದು ಚಿನ್ನದ ನಗೆ ಸೂಸಿದರು. ಅವರು 14 ವರ್ಷಗಳ ನಂತರ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗೆ ಮರಳಿದ್ದರು.

ಶಕ್ತಿಶಾಲಿ ’ಪಟ್‌’ ಮತ್ತು ವೈವಿಧ್ಯದಿಂದ ಕೂಡಿದ ಸಂಭ್ರಮಾಚರಣೆಯ ಮೂಲಕ ಅರ್ಹತಾ ಸುತ್ತಿನ ಸ್ಪರ್ಧೆಯ ನಂತರ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದ ಅಮೆರಿಕದ ರಾವೆನ್ ಸಾಂಡರ್ಸ್‌ ಬೆಳ್ಳಿ ಪದಕ ಗೆದ್ದುಕೊಂಡರೆ ನ್ಯೂಜಿಲೆಂಡ್‌ನ ವಲೆರಿ ಆ್ಯಡಮ್ಸ್‌ ಕಂಚು ಗೆದ್ದರು. ಆರನೇ ಸ್ಥಾನಕ್ಕೆ ಕುಸಿದ ನ್ಯೂಜಿಲೆಂಡ್‌ನ ಮ್ಯಾಡಿಸನ್ ಲೀ (18.98) ಮತ್ತು ಎಂಟನೇ ಸ್ಥಾನ ಗಳಿಸಿದ ಬ್ರಿಟನ್‌ನ ಸಾರಾ ಗಂಬೆಟಾ (18.88) ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.

ಯುಲಿಮರ್ ರೋಜಾಸ್ ವಿಶ್ವ ದಾಖಲೆ

ಕತಾರ್‌ನ ಎಸ್ಸಾ ಮುತಾಸ್ ಬರ್ಶಿಮ್ ಪುರುಷರ ಜೈಜಂಪ್‌ನಲ್ಲಿ ಚೆನ್ನ ಗೆದ್ದರು. 2.37 ಮೀಟರ್ಸ್ ಎತ್ತರದ ಸಾಧನೆ ಮಾಡಿದ ಅವರು ಇಟಲಿಯ ಗ್ಯಾನ್‌ಮಾರ್ಕೊ ತಂಬೆರಿ ಅವರನ್ನು ಹಿಂದಿಕ್ಕಿದರು. ಬೆಲಾರಸ್‌ನ ಮ್ಯಾಕ್ಸಿಮ್ ನೆಡಾಸೆಕು ಕಂಚಿನ ಪದಕ ಗೆದ್ದರು.

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ವೆನೆಜುವೆಲಾದ ಯುಲಿಮರ್ ರೋಜಾಸ್ ವಿಶ್ವ ದಾಖಲೆಯೊಂದಿಗೆ (15.67 ಮೀಟರ್ಸ್‌) ಚಿನ್ನ ಗಳಿಸಿದರು. ಪೋರ್ಚುಗಲ್‌ನ ಪ್ಯಾಟ್ರಿಸಿಯಾ ಮಮೋನಾ (15.01 ಮೀ) ಬೆಳ್ಳಿ ಮತ್ತು ಸ್ಪೇನ್‌ನ ಅನಾ ಪೆಲೆಟಿರೊ (14.87 ಮೀ) ಕಂಚು ಗೆದ್ದರು.

ಶಾಟ್‌ಪಟ್‌

ಕಾಂಗ್ ಲಿಕಿಯಾವೊ

20.58 ಮೀಟರ್ಸ್‌

ರವೇನ್ ಸಾಂಡರ್ಸ್

19.79 ಮೀಟರ್ಸ್‌

ವಲೇರಿ ಆ್ಯಡಮ್ಸ್‌

19.62 ಮೀಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.