ADVERTISEMENT

ಜಪಾನ್‌: ಮತ್ತಷ್ಟು ನಗರಗಳಿಗೆ ಕೋವಿಡ್‌ ತುರ್ತು ಪರಿಸ್ಥಿತಿ ವಿಸ್ತರಣೆ

ಒಸಾಕಾದಲ್ಲಿ ಸೋಂಕಿತರಿಂದ ತುಂಬಿರುವ ಆಸ್ಪತ್ರೆಗಳು

ಏಜೆನ್ಸೀಸ್
Published 14 ಮೇ 2021, 17:29 IST
Last Updated 14 ಮೇ 2021, 17:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಕೊರೊನಾ ವೈರಸ್‌ ಹಾವಳಿ ಅಂಕೆಗೆ ಸಿಗದ ಕಾರಣ ಜಪಾನ್‌, ಆರು ನಗರಳಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ಒಟ್ಟು ಒಂಬತ್ತು ನಗರಗಳಿಗೆ ವಿಸ್ತರಿಸಿದೆ. ಇದರ ನಡುವೆಯೇ ಪ್ರಧಾನಿ ಯೊಶಿಹಿಡೆ ಸುಗಾ ಅವರು ಒಲಿಂಪಿಕ್ಸ್‌ ನಡೆಸುವುದಕ್ಕೆ ದೃಢ ನಿಶ್ಚಯ ತಾಳಿದ್ದಾರೆ.

ಟೋಕಿಯೊದಲ್ಲಿ ಕ್ರೀಡೆಗಳ ಆರಂಭಕ್ಕೆ ಇನ್ನುಳಿದಿರುವುದು ಸುಮಾರು 70 ದಿನಗಳು ಮಾತ್ರ. ಒಲಿಂಪಿಕ್‌ ಕ್ರೀಡೆಗಳು ಹತ್ತಿರ ಬರುತ್ತಿರುವಂತೆ ಸೋಂಕು ಹಾವಳಿಯನ್ನು ನಿಯಂತ್ರಣಕ್ಕೆ ತರಲು ಜಪಾನ್‌ ಹೆಣಗಾಡುತ್ತಿದೆ. ಹೊಸದಾಗಿ ತುರ್ತು ಪರಿಸ್ಥಿತಿ ವ್ಯಾಪ್ತಿಯೊಳಗೆ ಬಂದಿರುವ ನಗರಗಳೆಂದರೆ ಹೊಕೈಡೊ, ಹಿರೋಷಿಮಾ ಮತ್ತು ಒಕಾಯಾಮ. ಹೊಕೈಡೊದಲ್ಲಿ ಒಲಿಂಪಿಕ್ಸ್‌ ಮ್ಯಾರಥಾನ್‌ ಸ್ಪರ್ಧೆಗಳು ನಿಗದಿಯಾಗಿವೆ.

ಪ್ರಸ್ತುತ ಸೋಂಕು ಹಾವಳಿ ಮೇರೆಮೀರಿದ್ದರೂ ಸುರಕ್ಷಿತವಾಗಿ ಮತ್ತು ಸುಭದ್ರತೆಯಿಂದ ಒಲಿಂಪಿಕ್ಸ್ ನಡೆಸುವುದಕ್ಕೆ ಬದ್ಧರಾಗಿದ್ದೇವೆ ಎಂದು ಸುಗಾ ಒತ್ತಿ ಹೇಳಿದರು. ವಿದೇಶಿ ಕ್ರೀಡಾಪಟುಗಳ ಚಲನವಲನಕ್ಕೆ ಮಿತಿ ಹೇರಿ ದೇಶದ ಪ್ರಜೆಗಳ ಆರೋಗ್ಯ ರಕ್ಷಣೆ ಖಾತರಿಪಡಿಸಲಾಗುತ್ತದೆ. ಮಾರ್ಗಸೂಚಿ ಉಲ್ಲಂಘಿಸುವ ವಿದೇಶಿ ಕ್ರೀಡಾಪಟುಗಳ ಜೊತೆ ಪತ್ರಕರ್ತರನ್ನು ದೇಶದಿಂದ ಹೊರಕಳಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಜನರಿಗಾಗುವ ತೊಂದರೆಗಳನ್ನು ಬಲ್ಲೆ. ಆದರೆ ಸೋಂಕು ಇನ್ನಷ್ಟು ಹರಡುವುದನ್ನು ತಡೆಯುವುದಕ್ಕೆ, ಆ ಮೂಲಕ ಜನರ ಜೀವ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುತ್ತೇನೆ’ ಎಂದಿದ್ದಾರೆ ಸುಗಾ. ಶುಕ್ರವಾರ ಸರ್ಕಾರಿ ಕಾರ್ಯಪಡೆಯ ಸಭೆಯ ನಂತರ ಅವರು ಈ ಪ್ರಕಟಣೆ ನೀಡಿದ್ದಾರೆ.

ಪ್ರಮುಖ ನಗರಗಳಲ್ಲಿ ಮೇ 31ರವರೆಗೆ ತುರ್ತು ಪರಿಸ್ಥಿತಿ ಹೇರಲಾಗಿದೆ. ಬಾರ್‌ಗಳು, ಕರವೊಕೆ ಪಾರ್ಲರ್‌ಗಳು, ಮನರಂಜನಾ ತಾಣಗಳನ್ನು ಮುಚ್ಚಲಾಗಿದೆ. ನಿರ್ಬಂಧ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸಲಾಗುತ್ತಿದೆ.

ಜನನಿಬಿಡ ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ರೂಪಾಂತರಗೊಂಡ ವೈರಸ್‌ಗಳು ಇನ್ನಷ್ಟು ಹರಡದಂತೆ ತಡೆಯವುದು ಸದ್ಯದ ಸ್ಥಿತಿಯಲ್ಲಿ ಅತಿ ಮುಖ್ಯವಾಗಿದೆ ಎಂದಿದ್ದಾರೆ ಪ್ರಧಾನಿ.

ಏಪ್ರಿಲ್‌ 25ರಿಂದಲೇ ಟೋಕಿಯೊ, ಒಸಾಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ನಂತರ ವಿಸ್ತರಣೆಯಾಗುತ್ತಿರುವುದು ಇದು ಎರಡನೇ ಬಾರಿ.

ಆಸ್ಪತ್ರೆಗಳು ಫುಲ್‌: ಗಮನಾರ್ಹ ಸಂಗತಿ ಎಂದರೆ ನಿರ್ಬಂಧಗಳ ಹೊರತಾಗಿಯೂ ಸೋಂಕು ಅಂಕೆಗೆ ಸಿಗದೇ ಇನ್ನಷ್ಟು ಪ್ರದೇಶಗಳಿಗೆ ಹರಡುತ್ತಿದೆ. ಪ್ರಮುಖ ನಗರ ಒಸಾಕಾದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು ಆಸ್ಪತ್ರೆಗಳು ಕೋವಿಡ್‌–19 ರೋಗಿಗಳಿಂದ ತುಂಬಿಹೋಗಿವೆ. ಹಲವರು ಮನೆ ಮತ್ತು ಹೋಟೆಲ್‌ ಕೊಠಡಿಗಳಲ್ಲಿ ಆಮ್ಲಜನಕದೊಡನೆ ಕಾಯುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಆಸ್ಪತ್ರೆಗಳಲ್ಲಿ ಮಾತ್ರ ಸೋಂಕುಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತರ ರೋಗಿಗಳ ಚಿಕಿತ್ಸೆಗೆ ಸದ್ಯ ಕಡಿವಾಣ ಹಾಕಲಾಗಿದೆ.

ವೈದ್ಯಕೀಯ ಸೌಲಭ್ಯಗಳ ಮೇಲೆ ಈಗಾಗಲೇ ಒತ್ತಡವಿದೆ. ಇನ್ನು ಒಲಿಂಪಿಕ್ಸ್‌ ನಡೆಯವುದರಿಂದ ಇನ್ನೆಷ್ಟು ಒತ್ತಡ ಆಗಬಹುದು ಎಂಬುದನ್ನು ಎಚ್ಚರಿಕೆಯಿಂದ ಅಂದಾಜು ಮಾಡುವಂತೆ ಸರ್ಕಾರ ನೇಮಿಸಿರುವ ತಜ್ಞರ ಆಯೋಗದ ಮುಖ್ಯಸ್ಥ ಡಾ.ಶಿಗೇರು ಒಮಿ ಮನವಿ ಮಾಡಿದ್ದಾರೆ.

ಮೇ ಅಂತ್ಯದಲ್ಲಿ ಪರಿಸ್ಥಿತಿ ನೋಡಿಕೊಂಡು, ತುರ್ತುಸ್ಥಿತಿ ವಿಸ್ತರಿಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸುಗಾ ತಿಳಿಸಿದ್ದಾರೆ.

ಜುಲೈ 23ರಿಂದ ಆಗಸ್ಟ್‌ 8ರವರೆಗೆ ನಡೆಯಬೇಕಿರುವ ಒಲಿಂಪಿಕ್ಸ್‌ಗೆ ಹೆಚ್ಚಿನ ಜಪಾನೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾರ್ಗಸೂಚಿಗಳಿಗೆ ಜನರು ಅಷ್ಟೊಂದು ಸಹಕರಿಸುತ್ತಿಲ್ಲ. ಕೇವಲ ಶೇ 2ಕ್ಕಿಂತ ಕಡಿಮೆ ಪ್ರಮಾಣದ ಜನರು ಲಸಿಕೆಯ ಡೋಸ್‌ ಪೂರೈಸಿದ್ದಾರೆ. ಮುಂದುವರಿದ ರಾಷ್ಟ್ರಗಳ ‍ಪೈಕಿ ಈ ಪ್ರಮಾಣ ಅತ್ಯಂತ ಕಡಿಮೆ.

ಗುರುವಾರ ಜಪಾನ್‌ನಲ್ಲಿ ಹೊಸದಾಗಿ 6,800 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 6,65,547ಕ್ಕೆ ಏರಿದೆ. ಈ ದ್ವೀಪಗಳ ರಾಷ್ಟ್ರದಲ್ಲಿ 11,255 ಮಂದಿ ಕೋವಿಡ್‌ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.