ADVERTISEMENT

ಒಲಿಂಪಿಕ್ಸ್‌ ಆಯೋಜಿಸುವ ದೃಢಸಂಕಲ್ಪ ಮಾಡಿದ್ದೇನೆ: ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ

ಏಜೆನ್ಸೀಸ್
Published 29 ಜನವರಿ 2021, 15:36 IST
Last Updated 29 ಜನವರಿ 2021, 15:36 IST
ಯೋಶಿಹಿದೆ ಸುಗಾ–ರಾಯಿಟರ್ಸ್ ಚಿತ್ರ
ಯೋಶಿಹಿದೆ ಸುಗಾ–ರಾಯಿಟರ್ಸ್ ಚಿತ್ರ   

ಟೋಕಿಯೊ: ದೇಶದಲ್ಲಿ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಟದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿರುವ ನಡುವೆಯೂ ಈ ವರ್ಷ ಒಲಿಂಪಿಕ್ಸ್‌ ಆಯೋಜಿಸುವ ದೃಢಸಂಕಲ್ಪ ಮಾಡಿರುವುದಾಗಿ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಹೇಳಿದ್ದಾರೆ.

ಟೋಕಿಯೊದಲ್ಲಿ ನಡೆದ, ವಿಶ್ವ ಆರ್ಥಿಕ ವೇದಿಕೆಯ ವರ್ಚುವಲ್ ಸಭೆಯೊಂದರಲ್ಲಿ ಮಾತನಾಡಿದ ಸುಗಾ, ‘ಜಾಗತಿಕ ಒಗ್ಗಟ್ಟು ಹಾಗೂ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಮಾನವನ ವಿಜಯದ ಸಂಕೇತವಾಗಿ ಈ ವರ್ಷದ ಬೇಸಿಗೆಯಲ್ಲಿ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಆಯೋಜಿಸುವ ದೃಢಸಂಕಲ್ಪವನ್ನು ನಾನು ಮಾಡಿದ್ದೇನೆ. ಈ ಕೂಟವು ವಿಶ್ವದಾದ್ಯಂತ ಜನರಿಗೆ ಧೈರ್ಯ ಮತ್ತು ಭರವಸೆಯನ್ನು ತುಂಬುವ ಸಂಕೇತವೂ ಆಗಲಿದೆ‘ ಎಂದು ಸುಗಾ ನುಡಿದರು.

2020ರಲ್ಲಿ ನಡೆಯಬೇಕಿದ್ದ ಟೋಕಿಯೊ ಕೂಟವು ಕೋವಿಡ್‌ ಹಿನ್ನೆಲೆಯಲ್ಲಿ 2021ರಲ್ಲಿ ನಿಗದಿಯಾಗಿದೆ. ಹಲವು ಬಿಕಟ್ಟಿನ ಪರಿಸ್ಥಿತಿಗಳ ಮಧ್ಯೆಯೂ ನಿಗದಿಯಂತೆ ಜುಲೈನಲ್ಲಿ ಕೂಟವನ್ನು ಆಯೋಜಿಸುವುದಾಗಿ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ.

ADVERTISEMENT

ಸುಗಾ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದು, ‘ಜಪಾನ್‌ನಲ್ಲಿ ಸಾಧ್ಯವಾದಷ್ಟು ಬೇಗ ಕೊರೊನಾ ಸೋಂಕು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದು, ಕೂಟವನ್ನು ಸುರಕ್ಷಿತವಾಗಿ ಆಯೋಜಿಸುವ ವಿಶ್ವಾಸವಿದೆ‘ ಎಂದಿದ್ದಾರೆ.

ಕೋವಿಡ್‌–19 ಪಿಡುಗಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪಾರದರ್ಶನ ತನಿಖೆ ನಡೆಸಬೇಕು ಎಂದೂ ಅವರು ಇದೇ ವೇಳೆ ಒತ್ತಾಯಿಸಿದರು. ಮುಂದೇನಾದರೂ ಇಂತಹ ಪಿಡುಗುಗಳು ಎದುರಾದರೆ ಅವುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆಈ ತನಿಖೆಯಿಂದ ತಿಳಿದುಕೊಳ್ಳಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.