ADVERTISEMENT

ಹೆಚ್ಚು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಭಾರತದ ಅಥ್ಲೀಟ್‌ಗಳಿಗೆ ಸೂಚಿಸಲಿದೆ ಜಪಾನ್

ರಾಯಿಟರ್ಸ್
Published 27 ಜೂನ್ 2021, 4:14 IST
Last Updated 27 ಜೂನ್ 2021, 4:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬರುವ ಭಾರತ ಮತ್ತು ಇತರ ಐದು ದೇಶಗಳ ಅಥ್ಲೀಟ್‌ಗಳು ಹೆಚ್ಚಿನ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಜಪಾನ್ ಸೂಚಿಸಲಿದೆ ಎಂದು ವರದಿಯಾಗಿದೆ.

ಕೊರೊನಾ ವೈರಸ್‌ನ ಪ್ರಬಲ ಡೆಲ್ಟಾ ರೂಪಾಂತರದಿಂದ ತೊಂದರೆಗೆ ಒಳಗಾಗಿರುವ ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಏಳು ದಿನಗಳ ಕಾಲ ದೈನಂದಿನ ಸೋಂಕು ಪತ್ತೆ ಪರೀಕ್ಷೆಗೆ ಒಳಪಡುವಂತೆ ನಿಯಮ ರೂಪಿಸಲು ಜಪಾನ್ ಮುಂದಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಸದ್ಯ ಎಲ್ಲ ಅಥ್ಲೀಟ್‌ಗಳು ಒಲಿಂಪಿಕ್ಸ್‌ಗೆಂದು ಜಪಾನ್‌ಗೆ ತೆರಳುವ ಮುನ್ನ ನಾಲ್ಕು ದಿನಗಳ ಅವಧಿಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.

ಇದೀಗ ಜಪಾನ್ ಸರ್ಕಾರ ಹೊಸ ನಿಯಮ ರೂಪಿಸಲು ಮುಂದಾಗಿದ್ದು ಇದು ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಗಾನಿಸ್ತಾನದ ಅಥ್ಲೀಟ್‌ಗಳಿಗೆ ಅನ್ವಯವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

ಈಗಾಗಲೇ ಜಪಾನ್‌ಗೆ ಬಂದಿರುವ ಯುಗಾಂಡ ತಂಡದ ಸದಸ್ಯರೊಬ್ಬರಿಗೆ ಸೋಂಕು ಪತ್ತೆ ಪರೀಕ್ಷೆಯಲ್ಲಿ ಡೆಲ್ಟಾ ರೂಪಾಂತರ ವೈರಸ್‌ ಇರುವುದು ಶುಕ್ರವಾರ ದೃಢಪಟ್ಟಿತ್ತು. ಯುಗಾಂಡ ತಂಡದ ಸದಸ್ಯನಲ್ಲಿ ಪತ್ತೆಯಾದ ಸೋಂಕು ರೂಪಾಂತರಿತ ಡೆಲ್ಟಾ ಎನ್ನುವುದು ಖಚಿತಪಟ್ಟಿದೆ ಎಂದು ಒಲಿಂಪಿಕ್‌ ಸಚಿವೆ ಟಮಾಯೊ ಮಾರುಕಾವಾ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.