ADVERTISEMENT

ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್: ಕಂಚಿನ ಪದಕಕ್ಕೆ ಭಾರತ–ಅರ್ಜೆಂಟೀನಾ ಸೆಣಸು

ಪಿಟಿಐ
Published 9 ಡಿಸೆಂಬರ್ 2025, 14:27 IST
Last Updated 9 ಡಿಸೆಂಬರ್ 2025, 14:27 IST
ಭಾರತ ಜೂನಿಯರ್ ಪುರುಷರ ಹಾಕಿ ತಂಡದ ಆಟಗಾರರು –ಪಿಟಿಐ ಚಿತ್ರ
ಭಾರತ ಜೂನಿಯರ್ ಪುರುಷರ ಹಾಕಿ ತಂಡದ ಆಟಗಾರರು –ಪಿಟಿಐ ಚಿತ್ರ   

ಚೆನ್ನೈ: ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್ ಕಿರೀಟವನ್ನು ಮರಳಿ ಪಡೆಯುವ‍ ಭಾರತ ತಂಡದ ಕನಸು ಕಮರಿರಬಹುದು. ಆದರೆ, ಬುಧವಾರ ನಡೆಯುವ ಕಂಚಿನ ಪದಕದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಉತ್ತಮ ಆಟ ಪ್ರದರ್ಶಿಸಿ ‘ಪೋಡಿಯಂ ಫಿನಿಷ್‌’ ಮಾಡುವ ಛಲದಲ್ಲಿದೆ.

ಒಂಬತ್ತು ವರ್ಷಗಳ ಹಿಂದೆ (2016) ಲಖನೌದಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಭಾರತ ತಂಡವು ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಜರ್ಮನಿಯ ವಿರುದ್ಧ 1-5 ಅಂತರದಿಂದ ಪರಾಭವಗೊಂಡಿತ್ತು. ಇದರೊಂದಿಗೆ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಭಾರತದ ಪ್ರಯತ್ನಕ್ಕೆ ತೆರೆಬಿತ್ತು.

ಜರ್ಮನಿ ವಿರುದ್ಧ ಆಘಾತಕಾರಿ ಸೋಲಿನಿಂದ ಎದೆಗುಂದಿರುವ ಭಾರತ ತಂಡವು ತವರಿನಲ್ಲಿ ನಡೆಯುವ ಟೂರ್ನಿಯಲ್ಲಿ ಕನಿಷ್ಠ ಕಂಚು ಗೆಲ್ಲುವತ್ತ ಚಿತ್ತ ಹರಿಸಿದೆ. ಹೀಗಾಗಿ, ದಿಗ್ಗಜ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಮಾರ್ಗದರ್ಶನದ ತಂಡವು ತನ್ನ ಹಿಂದಿನ ಲೋಪಗಳನ್ನು ಸರಿಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ADVERTISEMENT

ಮತ್ತೊಂದೆಡೆ, ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡವು ಭಾರತಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆಯಿದೆ. ಟೂರ್ನಿಯಲ್ಲಿ ಈಗಾಗಲೇ ತಮ್ಮ ಪರಾಕ್ರಮ ಪ್ರದರ್ಶಿಸಿದೆ. 2005 ಮತ್ತು 2021ರ ಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ನಲ್ಲಿ 1–2 ಗೋಲುಗಳಿಂದ ಸ್ಪೇನ್‌ ತಂಡಕ್ಕೆ ಮಣಿದಿತ್ತು. ಆ ತಂಡವೂ ಉನ್ನತ ಮಟ್ಟದಲ್ಲಿ ಅಭಿಯಾನ ಮುಗಿಸುವ ಹುಮ್ಮಸ್ಸಿನಲ್ಲಿದೆ. 

ಗುಂಪು ಹಂತದ ಪಂದ್ಯಗಳಲ್ಲಿ ದುರ್ಬಲ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಫಾರ್ವರ್ಡ್‌ಗಳು ಜರ್ಮನಿ ವಿರುದ್ಧ ಸತತ ವೈಫಲ್ಯ ಕಂಡರು. ದಿಲ್‌ರಾಜ್ ಸಿಂಗ್, ಅರ್ಷದೀಪ್ ಸಿಂಗ್, ಸೌರಭ್ ಆನಂದ್ ಕುಶ್ವಾಹ, ಗುರ್ಜೋತ್ ಸಿಂಗ್ ಮತ್ತು ಅಜಿತ್ ಯಾದವ್ ಅವರು ಜರ್ಮನಿ ಎದುರು ಹಲವು ಅವಕಾಶಗಳನ್ನು ಸೃಷ್ಟಿಸಿದರು. ಆದರೆ ಅವುಗಳು ಗೋಲುಗಳಾಗಿ ಪರಿವರ್ತನೆಯಾಗದಿರುವುದು ತಂಡವನ್ನು ಚಿಂತೆಗೀಡುಮಾಡಿದೆ.

ನಾಯಕ ರೋಹಿತ್ ನೇತೃತ್ವದ ಡಿಫೆಂಡಿಂಗ್ ವಿಭಾಗವು ಅರ್ಜೆಂಟೀನಾ ತಂಡವನ್ನು ನಿಯಂತ್ರಿಸಲು ತಮ್ಮ ನೈಜ ಆಟವನ್ನು ಪ್ರದರ್ಶಿಸಬೇಕಿದೆ. ಜರ್ಮನಿ ವಿರುದ್ಧದ ಪಂದ್ಯದಲ್ಲಿ ಮಿಡ್‌ಫೀಲ್ಡ್‌ನಲ್ಲಿಯೂ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. 

ಮತ್ತೊಂದು ಗಂಭೀರ ವಿಷಯವೆಂದರೆ ಭಾರತದ ಆಟಗಾರರು ‘ಪೆನಾಲ್ಟಿ ಕಾರ್ನರ್‌’ ಪರಿವರ್ತನೆಯ ಪ್ರಮಾಣ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ. ದೀರ್ಘಕಾಲದಿಂದ ತಂಡ ಈ ಸಮಸ್ಯೆ ಎದುರಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.