ADVERTISEMENT

ಜೂನಿಯರ್ ಏಷ್ಯಾಕಪ್ ಹಾಕಿಯಲ್ಲಿ ಆಡುವ ಗುರಿ: ಇಶಿಕಾ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 6:58 IST
Last Updated 1 ಆಗಸ್ಟ್ 2020, 6:58 IST
ಹಾಕಿ
ಹಾಕಿ   

ಗ್ವಾಲಿಯರ್ (ಮಧ್ಯಪ್ರದೇಶ): ಭಾರತ ಜೂನಿಯರ್ ಮಹಿಳೆಯರ ಹಾಕಿ ತಂಡದ ಬೆನ್ನೆಲುಬು ಎಂದೇ ಪರಿಗಣಿಸಲಾಗಿರುವ ಇಶಿಕಾ ಚೌಧರಿ ಅವರಿಗೆ ಮುಂದಿನ ವರ್ಷ ನಡೆಯಲಿರುವ ಜೂನಿಯರ್ ಮಹಿಳೆಯರ ಏಷ್ಯಾ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದು ಮತ್ತು ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಗಳಿಸುವುದೇ ಪ್ರಮುಖ ಗುರಿಯಂತೆ.

‘ಮುಂದಿನ ಹಾದಿಯ ಗುರಿ ಸ್ಪಷ್ಟವಾಗಿದೆ. ಏಷ್ಯಾಕಪ್ ಗೆದ್ದು ಭಾರತ ತಂಡವನ್ನು ಒಂದನೇ ಕ್ರಮಾಂಕಕ್ಕೆ ತಲುಪಿಸುವುದು ನನ್ನ ಆಸೆ’ ಎಂದು 20 ವರ್ಷದ ಇಶಿಕಾ ಹೇಳಿರುವುದಾಗಿ ಹಾಕಿ ಇಂಡಿಯಾ ತಿಳಿಸಿದೆ. ಅವರ ಹೇಳಿಕೆಯನ್ನು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮಿಡ್‌ಫೀಲ್ಡ್ ವಿಭಾಗದ ಆಟಗಾರ್ತಿ ಇಶಿಕಾ 11ನೇ ವಯಸ್ಸಿನಿಂದ ಹಾಕಿ ಆಡುತ್ತಿದ್ದು ಮಧ್ಯಪ್ರದೇಶ ಹಾಕಿ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದ್ದಾರೆ. ಅಕಾಡೆಮಿ ತಂಡದಿಂದ ಜೂನಿಯರ್ ಮಹಿಳಾ ತಂಡದ ವರೆಗೆ ಅವರ ಹಾಕಿಯ ಹಾದಿಯ ತುಂಬ ಸಂಭ್ರಮವೇ ತುಂಬಿದೆ. ‘ನಾನು ಈ ಮಟ್ಟಕ್ಕೆ ಬೆಳೆಯಲು ಕೋಚ್‌ಗಳು ಮತ್ತು ಕುಟುಂಬದವರೇ ಕಾರಣ’ ಎಂದು ಅವರು ಹೇಳುತ್ತಾರೆ.

ADVERTISEMENT

‘ಮೊದಲ ಬಾರಿ ಸ್ಟಿಕ್ ಹಿಡಿದಾಗ ಭವಿಷ್ಯದ ಬಗ್ಗೆ ಯಾವ ಕಲ್ಪನೆಯೂ ಇರಲಿಲ್ಲ. ಹಾಕಿಯಲ್ಲಿ ಆರಂಭಿಕ ವರ್ಷಗಳನ್ನು ಕಳೆಯುವುದಾದರೂ ಹೇಗೆ ಎಂಬ ಆತಂಕ ಕಾಡುತ್ತಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಧೈರ್ಯ ತುಂಬಿದವರು ಕೋಚ್‌ಗಳು ಮತ್ತು ಮನೆಮಂದಿ’ ಎಂದು ಅವರು ವಿವರಿಸಿದರು.

ಜೂನಿಯರ್ ಮಹಿಳಾ ತಂಡದ ರೀನಾ ಖೋಖರ್ ಅಥವಾ 2019ರ ಎಫ್‌ಐಎಚ್‌ ವರ್ಷದ ಮಹಿಳಾ ಆಟಗಾರ್ತಿ ಎಂಬ ಬಿರುದು ಪಡೆದಿರುವ ನೆದರ್ಲೆಂಡ್ಸ್‌ನ ಇವಾ ಡಿ ಗೋಯ್ಡೆ ಅವರಿಗೆ ಇಶಿಕಾ ಅವರನ್ನು ಹೋಲಿಸಲಾಗುತ್ತದೆ.

‘ಮಧ್ಯಪ್ರದೇಶ ಹಾಕಿ ಅಕಾಡೆಮಿಯಲ್ಲಿದ್ದಾಗ ಇಶಿಕಾ ಆಡಿದ ಮೊದಲ ರಾಷ್ಟ್ರೀಯ ಟೂರ್ನಿ ಹಾಕಿ ಇಂಡಿಯಾದ ಮೂರನೇ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್. ಅಲ್ಲಿ ಅವರು ಬೆಳ್ಳಿ ಪದಕ ಗೆದ್ದ ತಂಡದ ಸದಸ್ಯೆಯಾಗಿದ್ದರು. ಆ ಟೂರ್ನಿ ಅವರ ಪ್ರತಿಭೆಯನ್ನು ಬೆಳಗಿತು. ಮುಂದಿನ ಕೆಲವು ವರ್ಷ ಅವರು ಅಕಾಡೆಮಿಯ ಜೂನಿಯರ್ ಮತ್ತು ಸಬ್‌ ಜೂನಿಯರ್ ವಿಭಾಗದ ಆಧಾರಸ್ತಂಭವಾಗಿದ್ದರು. 2014ರ ಹಾಕಿ ಇಂಡಿಯಾ ರಾಷ್ಟ್ರೀಯ ಸಬ್‌ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ತಂಡ ಚಿನ್ನ ಗೆಲ್ಲುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. 2016ರ ಟೂರ್ನಿಯಲ್ಲಿ ಅವರಿದ್ದ ತಂಡ ಕಂಚಿನ ಪದಕ ಗಳಿಸಿತು.

‘ಶ್ರೇಷ್ಠ ಅಕಾಡೆಮಿಯೊಂದರಲ್ಲಿ ಕಲಿಕೆ ಆರಂಭಿಸಿದ್ದು ನನ್ನ ಬದುಕಿನ ಬಹುದೊಡ್ಡ ಮೈಲಿಗಲ್ಲು ಎಂದು ನನಗೆ ಅನಿಸುತ್ತದೆ. ಅಲ್ಲಿ ಹಾಕಿ ಕಲಿಯಲು ಅತ್ಯುತ್ತಮ ವಾತಾವರಣವಿತ್ತು. ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ನೈತಿಕ ಬಲ ತುಂಬಿದ್ದೇ ಆ ಅಕಾಡೆಮಿ’ ಎಂದು ಇಶಿಕಾ ಹೇಳಿದರು.

2016ರಲ್ಲಿ ಇಶಿಕಾ ಅವರಿಗೆ ಅಕಾಡೆಮಿಯ ಸೀನಿಯರ್ ತಂಡದಲ್ಲಿ ಆಡಲು ಅವಕಾಶ ನೀಡಲಾಯಿತು. ಆ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರಿದ್ದ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಬೆಂಗಳೂರಿನಲ್ಲಿ ತೋರಿದ ಸಾಮರ್ಥ್ಯವು ಅವರನ್ನು ರಾಷ್ಟ್ರೀಯ ಶಿಬಿರಕ್ಕೆ ಆಹ್ವಾನಿಸುವಂತೆ ಮಾಡಿತು. 2017ರಲ್ಲಿ ಆಸ್ಟ್ರೇಲಿಯಾ ಹಾಕಿ ಲೀಗ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಮುಂದಿನ ವರ್ಷದ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸುವಲ್ಲಿ ಭಾರತ ತಂಡಕ್ಕೆ ನೆರವಾದರು. ಕಳೆದ ವರ್ಷ ಐರ್ಲೆಂಡ್‌ನಲ್ಲಿ ನಡೆದ ನಾಲ್ಕು ರಾಷ್ಟ್ರಗಳ 21 ವರ್ಷದೊಳಗಿನವರ ಕ್ಯಾಂಟರ್ ಫಿಟ್ಸ್‌ಜೆರಾಲ್ಡ್ ಟೂರ್ನಿಯಲ್ಲೂ ಆಸ್ಟ್ರೇಲಿಯಾದಲ್ಲಿ ನಡೆದ ಮೂರು ರಾಷ್ಟ್ರಗಳ ಟೂರ್ನಿಯಲ್ಲೂ ‍ಪ್ರಶಸ್ತಿ ಗಳಿಸಿದ ತಂಡದಲ್ಲಿ ಅವರಿದ್ದರು. ಬೆಲ್ಜಿಯಂನಲ್ಲಿ ನಡೆದಿದ್ದ ಆರು ರಾಷ್ಟ್ರಗಳ ಆಹ್ವಾನಿತ ಟೂರ್ನಿಯ ರನ್ನರ್ ಅಪ್ ತಂಡದಲ್ಲೂ ಇಶಿಕಾ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.