ADVERTISEMENT

ವಿಶ್ವ ಜೂನಿಯರ್ ಶೂಟಿಂಗ್: ಮಿಂಚಿದ ಮನು, ಭಾರತಕ್ಕೆ ನಾಲ್ಕು ಚಿನ್ನ

ಪದಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ

ಪಿಟಿಐ
Published 3 ಅಕ್ಟೋಬರ್ 2021, 11:25 IST
Last Updated 3 ಅಕ್ಟೋಬರ್ 2021, 11:25 IST
10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಶ್ರೀಕಾಂತ್ ಧನುಷ್‌, ರಾಜ್‌ಪ್ರೀತ್ ಸಿಂಗ್‌ ಮತ್ತು ಪಾರ್ಥ್‌ ಮಖೀಜಾ– ಪಿಟಿಐ ಚಿತ್ರ
10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಶ್ರೀಕಾಂತ್ ಧನುಷ್‌, ರಾಜ್‌ಪ್ರೀತ್ ಸಿಂಗ್‌ ಮತ್ತು ಪಾರ್ಥ್‌ ಮಖೀಜಾ– ಪಿಟಿಐ ಚಿತ್ರ   

ಲಿಮಾ, ಪೆರು:ಒಲಿಂಪಿಯನ್ ಮನು ಬಾಕ್ಸರ್‌ ಎರಡು ಚಿನ್ನದ ಪದಕಗಳಿಗೆ ಗುರಿಯಿಟ್ಟರು. ಇದರೊಂದಿಗೆ ವಿಶ್ವ ಜೂನಿಯರ್‌ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಸಂಪೂರ್ಣ ಪಾರಮ್ಯ ಮೆರೆಯಿತು. ಪದಕಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಭಾನುವಾರ ಅಗ್ರಸ್ಥಾನಕ್ಕೇರಿತು.

ಭಾನುವಾರ ಲಭ್ಯವಿದ್ದ ಆರು ಚಿನ್ನದ ಪದಕಗಳ ಪೈಕಿ ನಾಲ್ಕು ಭಾರತದ ಪಾಲಾದವು. ಅಲ್ಲದೆ ಎರಡು ಬೆಳ್ಳಿ ಪದಕಗಳನ್ನು ದೇಶದ ಶೂಟರ್‌ಗಳು ತಮ್ಮದಾಗಿಸಿಕೊಂಡರು.

10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದ ಪದಕದ ಸುತ್ತುಗಳಲ್ಲಿ ಭಾರತದ ಶೂಟರ್‌ಗಳು ಪ್ರಾಬಲ್ಯ ಸಾಧಿಸಿದರು. ಮಿಶ್ರ, ಮಹಿಳಾ ಮತ್ತು ಪುರುಷರ ತಂಡಗಳು ಅಲ್ಲದೆ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಪುರುಷರು ಚಿನ್ನಕ್ಕೆ ಗುರಿಯಿಟ್ಟರು.

ADVERTISEMENT

ಭಾರತದ ಬಳಿ ಸದ್ಯ ತಲಾ ಆರು ಚಿನ್ನ, ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳಿವೆ. ತಲಾ ನಾಲ್ಕು ಚಿನ್ನ, ಬೆಳ್ಳಿ ಮತ್ತು ಎರಡು ಕಂಚು ಗೆದ್ದಿರುವ ಅಮೆರಿಕ ಪದಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಮನು ಭಾಕರ್‌ ಇಲ್ಲಿ ಅದ್ಭುತ ಲಯಕ್ಕೆ ಮರಳಿದ್ದಾರೆ. ಭಾನುವಾರ ಪಿಸ್ತೂಲ್ ವಿಭಾಗದ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಅಗ್ರಸ್ಥಾನ ಗಳಿಸಿದರೆ, ರೈದಮ್ ಸಂಗ್ವಾನ್‌, ಶಿಖಾ ನರ್ವಾಲ್‌ ಜೊತೆಗೂಡಿ ಮಹಿಳಾ ತಂಡ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಮೂರು ಚಿನ್ನದ ಪದಕಗಳು ಅವರು ಮುಡಿಗೇರಿವೆ.

ಮಹಿಳಾ ತಂಡವು ಫೈನಲ್‌ನಲ್ಲಿ 16–12ರಿಂದ ಬೆಲಾರಸ್ ತಂಡವನ್ನು ಸೋಲಿಸಿತು. ನವೀನ್‌, ಸರಬ್ಜೋತ್‌ ಮತ್ತು ಶಿವ ನರ್ವಾಲ್ ಅವರಿದ್ದ ಪುರುಷರ ತಂಡವು 16–14ರಿಂದ ಬೆಲಾರಸ್‌ ತಂಡದ ಸವಾಲನ್ನೇ ಮೀರಿತು.

ಇದಕ್ಕೂ ಮೊದಲು 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಭಾರತ ಪುರುಷರ ತಂಡವು ಚಿನ್ನ ತನ್ನದಾಗಿಸಿಕೊಂಡಿತ್ತು. ಶ್ರೀಕಾಂತ್ ಧನುಷ್‌, ರಾಜ್‌ಪ್ರೀತ್ ಸಿಂಗ್‌ ಮತ್ತು ಪಾರ್ಥ್‌ ಮಖೀಜಾ ಅವರಿದ್ದ ತಂಡವು ಫೈನಲ್‌ನಲ್ಲಿ ಅಮೆರಿಕವನ್ನು ಮಣಿಸಿತ್ತು.

ಮಹಿಳೆಯರ 10 ಮೀ. ಏರ್‌ ರೈಫಲ್‌ನಲ್ಲಿ ಭಾರತದ ನಿಶಾ ಕನ್ವರ್‌, ಜೀನಾ ಖಿಟ್ಟಾ ಮತ್ತು ಆತ್ಮಿಕಾ ಗುಪ್ತಾ ಅವರಿದ್ದ ತಂಡವು ಹಂಗರಿ ಎದುರು ಸೋತು ಬೆಳ್ಳಿ ಪದಕ ಗಳಿಸಿತು. ಆತ್ಮಿಕಾ ಅವರು 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ರಾಜ್‌ಪ್ರೀತ್ ಜೊತೆಗೂಡಿ ಬೆಳ್ಳಿ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.