ADVERTISEMENT

ಜೂನಿಯರ್‌ ವಿಶ್ವ ಕಪ್‌ ಹಾಕಿ: ಡಚ್‌ ಸವಾಲನ್ನು ಬದಿಗೊತ್ತಿ ಭಾರತ ಸೆಮಿಗೆ ಲಗ್ಗೆ

ಪಿಟಿಐ
Published 12 ಡಿಸೆಂಬರ್ 2023, 13:42 IST
Last Updated 12 ಡಿಸೆಂಬರ್ 2023, 13:42 IST
<div class="paragraphs"><p>ಹಾಕಿ </p></div>

ಹಾಕಿ

   

ಕ್ವಾಲಾಲಂಪುರ: ಕೆಚ್ಚೆದೆಯ ಆಟ ಪ್ರದರ್ಶಿಸಿದ ಭಾರತ ತಂಡ, ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ 4–3 ಗೋಲುಗಳಿಂದ ಪ್ರಬಲ ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ದಾಪುಗಾಲಿಟ್ಟಿತು.

ಮಧ್ಯಂತರದ ವೇಳೆ 0–2 ರಿಂದ ಹಿಂದೆಬಿದ್ದಿದ್ದ ಭಾರತ ಮೂರನೇ ಕ್ವಾರ್ಟರ್‌ ನಂತರವೂ (15 ನಿಮಿಷಗಳು ಇರುವಾಗ) 2–3 ರಿಂದ ಹಿನ್ನಡೆಯಲ್ಲಿತ್ತು. ಆದರೆ ಹೋರಾಟ ತೋರಿ ಜಯಗಳಿಸಿದ್ದು ಛಲದ ಮನೋಭಾವಕ್ಕೆ ನಿದರ್ಶನವಾಯಿತು. ಭಾರತ ತಂಡ ಸೆಮಿಫೈನಲ್‌ನಲ್ಲಿ ಜರ್ಮನಿಯನ್ನು ಎದುರಿಸಲಿದೆ.

ADVERTISEMENT

ಐದನೇ ನಿಮಿಷ ಟಿಮೊ ಬೋರ್ಸ್ ಅವರು ಪೆನಾಲ್ಟಿ ಕಾರ್ನರ್ ಪರಿವರ್ತಿಸಿ ಡಚ್ಚರ ಪಾಳೆಯಕ್ಕೆ ಮುನ್ನಡೆ ಒದಗಿಸಿದರು. ಭಾರತ ತಂಡ ರಕ್ಷಣೆಗೆ ಒತ್ತು ನೀಡಿ ಆಡಿದರೂ, ನೆದರ್ಲೆಂಡ್ಸ್ ತಂಡ 16ನೇ ನಿಮಿಷ ಮುನ್ನಡೆ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಎರಡನೆ ಕ್ವಾರ್ಟರ್‌ನಲ್ಲಿ ಪೆಪಿನ್ ವಾನ್‌ಡರ್‌ ಹೀಡನ್ ಅವರೂ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ವಿರಾಮದ ವೇಳೆಗೆ ಇದೇ ಅಂತರ ಮುಂದುವರಿಯಿತು.

ಮೂರನೇ ಕ್ವಾರ್ಟರ್‌ನಲ್ಲಿ (34ನೇ ನಿಮಿಷ), ಅರಿಜೀತ್‌ ಸಿಂಗ್ ಹುಂಡಲ್ ಅವರ ಪಾಸ್‌ನಲ್ಲಿ ಆದಿತ್ಯ ಲಾಲಗೆ ಭಾರತದ ಪರ ಮೊದಲ ಗೋಲು ಗಳಿಸಿದರು. ಎರಡು ನಿಮಿಷಗಳ ನಂತರ ‘ಪೆನಾಲ್ಟಿ ಸ್ಟ್ರೋಕ್‌’ ಅವಕಾಶವನ್ನು ಅರಿಜೀತ್ ಗೋಲಾಗಿ ಪರಿವರ್ತಿಸಿ ಭಾರತ ತಂಡ ಸ್ಕೋರ್ ಸಮ ಮಾಡಲು ನೆರವಾದರು.

ಭಾರತದ ಆಟಗಾರರು ಒತ್ತಡ ಹಾಕಿದರೂ, ನೆದರ್ಲೆಂಡ್ಸ್‌ 44ನೇ ನಿಮಿಷ ಮತ್ತೊಮ್ಮೆ ಮುನ್ನಡೆಯಿತು. ಒಲಿವಿಯರ್ ಹೊರ್ಟೆನ್ಶಿಯಸ್‌ ಅವರು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಹತ್ತು ನಿಮಿಷಗಳು ಉಳಿದಿರುವಂತೆ, ಭಾರತದ ಆಟಗಾರರು ಎದುರಾಳಿ ರಕ್ಷಣಾ ಪಡೆಯ ಮೇಲೆ ಒತ್ತಡ ಹೆಚ್ಚಿಸಿದರು. 52ನೇ ನಿಮಿಷ ಇದು ಫಲ ನೀಡಿತು. ಉತ್ತಮ ಗೋಲು ಯತ್ನದಲ್ಲಿ ಎದುರಾಳಿ ಕಡೆಯ ನೆಟ್‌ಗೆ ಬಡಿದು ರಿಬೌಂಡ್‌ ಆದ ಚೆಂಡನ್ನು ಸೌರಭ್ ಆನಂದ್ ಕುಶ್ವಾಹ ಅವರು ಗುರಿಮುಟ್ಟಿಸಿದರು. ಸ್ಕೋರ್‌ ಮತ್ತೆ (3–3) ಆಯಿತು.

ಮುಕ್ತಾಯಕ್ಕೆ ಬರೇ ಮೂರು ನಿಮಿಷಗಳಿರುವಾಗ (57ನೇ ನಿಮಿಷ) ನಾಯಕ ಉತ್ತಮ್ ಸಿಂಗ್‌ ಅವರು ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಪರಿವರ್ತಿಸಿ ತಂಡಕ್ಕೆ ಗೆಲುವಿನ ಗೋಲು ಗಳಿಸಿಕೊಟ್ಟರು.

ಡಚ್‌ ಪಡೆಯ ಪ್ರಬಲ ದಾಳಿಯ ನಡುವೆಯೂ ಭಾರತ ಕೊನೆಗಳಿಯಲ್ಲಿ ಎದುರಾಳಿಗೆ ಗೋಲು ನಿರಾಕರಿಸಿತು. ರಕ್ಷಣೆ ವಿಭಾಗದಲ್ಲಿ ರೋಹಿತ್‌ ಅವರು ಕನಿಷ್ಠ ಆರು ಪೆನಾಲ್ಟಿ ಕಾರ್ನರ್‌ಗಳಲ್ಲಿ ಎದುರಾಳಿಗಳ ಗೋಲು ಯತ್ನಕ್ಕೆ ತಡಗೋಡೆಯಾದರು. ಅವರ ಪರಿಶ್ರಮಕ್ಕೆ ‘ಪಂದ್ಯದ ಆಟಗಾರ’ ಗೌರವ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.