ADVERTISEMENT

ಕಳರಿಪಯಟ್ಟು ಕರ್ನಾಟಕದ ಪಟ್ಟು

ಮಹಮ್ಮದ್ ನೂಮಾನ್
Published 13 ಜನವರಿ 2019, 20:00 IST
Last Updated 13 ಜನವರಿ 2019, 20:00 IST
‘ಫ್ರೀ ಹ್ಯಾಂಡ್‌ ಫೈಟ್‌’ ವಿಭಾಗದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿಯ ಕ್ಷಣ ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌
‘ಫ್ರೀ ಹ್ಯಾಂಡ್‌ ಫೈಟ್‌’ ವಿಭಾಗದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿಯ ಕ್ಷಣ ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌   

ಕತ್ತಿ ಝಳಪಿಸುತ್ತಾ ಅತ್ತಿತ್ತ ಜಿಗಿದು, ಮೇಲಕ್ಕೆ ನೆಗೆದು ಪ್ರದರ್ಶಿಸುವ ಸಮರ ಕಲೆ ‘ಕಳರಿಪಯಟ್ಟು’ ನೋಡುವಾಗ ಮೈ ಜುಮ್ಮೆನ್ನದೆ ಇರದು. ಸ್ಪರ್ಧಿಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಈ ಸಮರ ಕಲೆ ಕೇರಳದಲ್ಲಿ ಹುಟ್ಟಿದ್ದಾದರೂ, ಈಗ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.

ಕಳರಿಪಯಟ್ಟು ಫೆಡರೇಷನ್‌ ಆಫ್‌ ಇಂಡಿಯಾ ಆಶ್ರಯದಲ್ಲಿ ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಕಳರಿಪಯಟ್ಟು ಚಾಂಪಿಯನ್‌ಷಿಪ್‌ನಲ್ಲಿ 19 ರಾಜ್ಯಗಳ ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಸಮರಕಲೆಗೆ ಹೆಚ್ಚಿನ ಪ್ರಚಾರ ಲಭಿಸುತ್ತಿದೆ ಎಂಬುದಕ್ಕೆ ಇಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳ ಸಂಖ್ಯೆಯೇ ಸಾಕ್ಷಿ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸಬ್‌–ಜೂನಿಯರ್‌, ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಫೆಡರೇಷನ್‌ ಕಪ್‌ ಕಳರಿಪಯಟ್ಟು ಚಾಂಪಿಯನ್‌ಷಿಪ್‌ ಕೂಡಾ ಇದೇ ವೇಳೆ ಆಯೋಜಿಸಲಾಗಿತ್ತು.

ADVERTISEMENT

ಕತ್ತಿ ಮತ್ತು ಗುರಾಣಿ ಹಿಡಿದು ಸಾಂಪ್ರದಾಯಿಕ ರೀತಿಯ ಕಾದಾಟದ ಜತೆಗೆ ಹೊಸತನದಿಂದ ಕೂಡಿರುವ ‘ಫ್ರೀ ಹ್ಯಾಂಡ್‌ ಫೈಟ್‌’ ವಿಭಾಗದಲ್ಲೂ ಸ್ಪರ್ಧೆಗಳು ನಡೆದವು. ಕರ್ನಾಟಕದ ಸಾಕಷ್ಟು ಸ್ಪರ್ಧಿಗಳು ತಮ್ಮಲ್ಲಿರುವ ಕಸರತ್ತು ತೋರಿದರು. ಪಟ್ಟು ಬಿಡದೆ ಪೈಪೋಟಿ ನಡೆಸಿ ನೋಡುಗರ ಮನಗೆದ್ದರು.

ಬೆಂಗಳೂರಿನ ‘ಕಳರಿ ಗುರುಕುಲಂ’ನ 33 ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಇಲ್ಲಿನ ಸ್ಪರ್ಧಿಗಳು ತಲಾ 14 ಚಿನ್ನ ಮತ್ತು ಬೆಳ್ಳಿ ಹಾಗೂ 19 ಕಂಚು ಸೇರಿದಂತೆ ಒಟ್ಟು 47 ಪದಕಗಳನ್ನು ತಮ್ಮದಾಗಿಸಿಕೊಂಡು ಪ್ರಭುತ್ವ ಮೆರೆದರು.

‘ಕಳರಿ ಗುರುಕುಲಂ’ ಸ್ಪರ್ಧಿಗಳು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದ್ದು ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಿಂದ ಪದಕಗಳನ್ನು ಬಾಚಿಕೊಳ್ಳುತ್ತಾ ಬಂದಿದ್ದಾರೆ. ಕಳೆದ ವರ್ಷ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ 16 ಚಿನ್ನದ ಪದಕಗಳನ್ನು ಜಯಿಸಿದ್ದರು.

ಈ ಗುರುಕುಲವನ್ನು ನಡೆಸುತ್ತಿರುವ ರಂಜನ್‌ ಮುಲ್ಲರತ್‌ ಅವರ ಕೈಕೆಳಗೆ 200 ಕ್ಕೂ ಹೆಚ್ಚು ಮಂದಿ ಕಳರಿಪಯಟ್ಟು ಕಲಿಯುತ್ತಿದ್ದಾರೆ. ರಂಜನ್‌ 20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳರಿ ಅಕಾಡೆಮಿ ಆರಂಭಿಸಿದ್ದರು. ಅದು ಈಗ ಕಳರಿ ಗುರುಕುಲಂ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ.

ಕಳರಿಪಯಟ್ಟು ಕಲಿಯುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಲು ಸಹಕಾರಿಯಾಗುತ್ತದೆ ಎಂಬುದು ಅವರ ಹೇಳಿಕೆ. ಇದೇ ಕಾರಣದಿಂದ ಹಲವರು ಕಳರಿಪಯಟ್ಟು ಕಲಿಯಲು ಗುರುಕುಲಂಗೆ ಬರುತ್ತಿದ್ದಾರೆ ಎನ್ನುವರು.

ಮನಸ್ಸು ಹಾಗೂ ದೇಹದ ನಡುವೆ ಸಮತೋಲನ ಸಾಧಿಸಲು ಕಳರಿಪಯಟ್ಟು ಉತ್ತಮ ವಿದ್ಯೆ. ಸತತ ಅಭ್ಯಾಸದಿಂದ ವ್ಯಕ್ತಿಯ ಜೀವನದಲ್ಲಿ ಶಿಸ್ತು ಮೂಡಿಸುತ್ತದೆ. ಮನಸ್ಸನ್ನು ಹದಗೊಳಿಸಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಹೇಳುವರು.

‘ಜಿಮ್‌ಗೆ ಹೋಗುವುದರಿಂದ ದೇಹವನ್ನು ಮಾತ್ರ ಹುರಿಗೊಳಿಸಬಹುದು. ದೇಹ ಮತ್ತು ಮನಸ್ಸಿನ ನಡುವಿನ ಸಮತೋಲನ ಸಾಧ್ಯವಿಲ್ಲ. ಕಳರಿ ಅಥವಾ ಯೋಗದಿಂದ ದೇಹ ಮತ್ತು ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಸಮರ ಕಲೆಯನ್ನು ಕೇವಲ ವ್ಯಾಯಾಮವಾಗಿ ನೋಡಬಾರದು’ ಎನ್ನುವರು.

ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದ ಉಪಾಸನಾ ಅವರು, ಕಳರಿಪಯಟ್ಟು ಕಲಿಯುವುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಆತ್ಮರಕ್ಷಣೆಗೆ ಸಹಾಯಕವಾಗುವುದಲ್ಲದೆ, ಏಕಾಗ್ರತೆ ಸಾಧಿಸಲು ನೆರವಾಗುತ್ತದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.