ADVERTISEMENT

ಜಿಂದಾಲ್‌ಗೆ ಕಂಠೀರವ ಕ್ರೀಡಾಂಗಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:30 IST
Last Updated 4 ಜುಲೈ 2019, 19:30 IST
   

ಬೆಂಗಳೂರು: ‘ಕಂಠೀರವ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ಪಂದ್ಯಗಳನ್ನು ಆಯೋಜಿಸಲು ಜಿಂದಾಲ್‌ ಕಂಪನಿ ಒಡೆತನದ ಫುಟ್‌ಬಾಲ್‌ ಕ್ಲಬ್‌ಗೆ (ಜೆಎಸ್‌ಡಬ್ಲ್ಯು ಜಿಂದಾಲ್‌ ಫುಟ್‌ಬಾಲ್‌ ಕ್ಲಬ್‌ ಪ್ರೈವೇಟ್‌ ಲಿಮಿಟೆಡ್‌) ಪರವಾನಗಿ ನೀಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

‘ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ಗೆ ಅಥ್ಲೀಟ್‌ಗಳ ಪ್ರವೇಶ ನಿಷೇಧಿಸಲಾಗಿದೆ’ ಎಂದು ಆಕ್ಷೇಪಿಸಿ 17 ಕೋಚ್‌ಗಳು ಹಾಗೂ 33 ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯ ಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಸಾರ್ವಜನಿಕ ಕ್ರೀಡಾಂಗಣಗಳನ್ನು ಮೂರನೇ ವ್ಯಕ್ತಿ ಅಥವಾ ಖಾಸಗಿಯವರಿಗೆ ಬಳಕೆ ಮಾಡಿಕೊಳ್ಳವ ಕುರಿತಂತೆ ಪಾರದರ್ಶಕ ರೀತಿಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ಪಷ್ಟ ನೀತಿಯೊಂದನ್ನು ರೂಪಿಸಿ’ ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

ADVERTISEMENT

ಒಪ್ಪಂದ ಅಕ್ರಮ: ‘2014ರ ಮೇ 22ರಿಂದ ಮೇ 31, 2017ರವರೆಗೆ ಕ್ರೀಡಾಂಗಣದ ಬಳಕೆ ಮಾಡಿಕೊಳ್ಳುವ ಬಗ್ಗೆ ಜಿಂದಾಲ್‌ ಜೊತೆ ಒಪ್ಪಂದವಾಗಿದೆ. ಇದು ಕಾನೂನುಬಾಹಿರ. ಒಪ್ಪಂದ ಮುಗಿದ ನಂತರವೂ 2017ರ ಆಗಸ್ಟ್‌ ನಿಂದ 2018ರ ಮೇ 31ರವರೆಗೆ ಪುನಃ ಕ್ರೀಡಾಂಗಣ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೆ ಯಾವುದೇ ಷರತ್ತು ಅಥವಾ ನಿಬಂಧನೆ ಗಳನ್ನೂ ವಿಧಿಸಿಲ್ಲ. ಇದು ಸಂಪೂರ್ಣ ಅಕ್ರಮ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕ್ರಮ ಕೈಗೊಳ್ಳಿ: ‘ಸರ್ಕಾರ ಈ ವಿಚಾರದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಆದ್ದರಿಂದ ಮೊದಲು ಒಪ್ಪಂದ ಮಾಡಿಕೊಂಡ ಪ್ರಕ್ರಿಯೆ ಮತ್ತು ಒಪ್ಪಂದ ಮುಗಿದ ಬಳಿಕವೂ ಬಳಕೆಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೆಪ್ಟೆಂಬರ್‌ 23ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದೆ.

ಸರ್ಕಾರದ ಪರ ವಾದ ಮಂಡಿಸಿದ ವಕೀಲ ಡಿ.ನಾಗರಾಜ್ ಅವರು, ‘ಭವಿಷ್ಯದಲ್ಲಿ ಸಾರ್ವಜನಿಕ ಕ್ರೀಡಾಂಗಣಗಳನ್ನು ಖಾಸಗಿಯವರ ಬಳಕೆಗೆ ನೀಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು’ ಎಂದು ನ್ಯಾಯಪೀಠಕ್ಕೆ ಲಿಖಿತ ಜ್ಞಾಪನಾ ಪತ್ರ ಸಲ್ಲಿಸಿದರು.

ವಿಚಾರಣೆಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.