ADVERTISEMENT

ಕರಾಟೆ: ಚೈತ್ರಶ್ರೀ ‘ಚಿನ್ನ’ದಂತ ಆಟ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:30 IST
Last Updated 1 ಮಾರ್ಚ್ 2020, 19:30 IST
ಚೈತ್ರಶ್ರೀ
ಚೈತ್ರಶ್ರೀ   

ಕರಾಟೆ ಕ್ರೀಡೆಯಲ್ಲಿ ಹೊಸ ಭರವಸೆ ಮೂಡಿಸಿರುವ ಕರ್ನಾಟಕದ ಯುವ ಪ್ರತಿಭೆ ಚೈತ್ರಶ್ರೀ. 16ನೇ ವಯಸ್ಸಿನಲ್ಲೇ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ 100ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಭಾಗವಹಿಸಿರುವ ಹಿರಿಮೆ ಬೆಂಗಳೂರಿನ ಬಾಲೆಯದ್ದು. ಗೆದ್ದ ಪದಕಗಳ ಸಂಖ್ಯೆ 150ಕ್ಕೂ ಅಧಿಕ. ಅದರಲ್ಲಿ ಚಿನ್ನದಸಾಧನೆ 130 ಎಂಬುದು ಹುಬ್ಬೇರಿಸುವಂತದ್ದು. ಒಲಿಂಪಿಕ್ಸ್‌ನಲ್ಲೂ ಸ್ವರ್ಣ ಸಾಧನೆ ಮಾಡಿ ದೇಶದ ಕೀರ್ತಿ ಬೆಳಗಿಸುವ ಕನಸು ಹೊತ್ತಿದ್ದಾರೆಉದ್ಯಾನ ನಗರಿಯ ಈ ಪಟು.

ಎಚ್‌.ಎನ್‌. ನಾರಾಯಣ್‌ ಹಾಗೂ ಗೀತಾ ದಂಪತಿಯ‍ಪುತ್ರಿ ಚೈತ್ರಶ್ರೀ ಅವರಿಗೆ ಬಾಲ್ಯದಿಂದಲೇ ಕರಾಟೆಯ ಹುಚ್ಚು. ಮಲ್ಲೇಶ್ವರಂನ ನಿರ್ಮಲಾರಾಣಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿದ್ದಾಗ ಚೈತ್ರಶ್ರೀಯ ಆಸಕ್ತಿ ಗಮನಿಸಿದ ತಂದೆ ಕರಾಟೆ ಕೋರ್ಸ್‌ಗೆ ಸೇರಿಸಿದರು. ಅಪಾರ ಪ್ರೋತ್ಸಾಹವನ್ನು ನೀಡುತ್ತಾ ಪ್ರತಿಭೆಗೆ ನೀರೆರೆದರು.

ಕಟಾ ಪ್ರಕಾರದಲ್ಲಿ ಜೂನಿಯರ್‌ ಹಾಗೂ ಕುಮಿಟೆಯಲ್ಲಿ 32 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಚೈತ್ರಶ್ರೀ, ಸದ್ಯ ರಾಜಾಜಿನಗರದ ಶ್ರೀ ಚೈತನ್ಯ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾರೆ. ಕ್ರೀಡೆಯ ಜೊತೆಗೆ ಓದನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಸಾಗುವ ಕಲೆ ಅವರಿಗೆ ಕರಗತ.

ADVERTISEMENT

2014ರಲ್ಲಿ‍ಪೋಲೆಂಡ್‌ನಲ್ಲಿ ಹಾಗೂ 2015ರಲ್ಲಿ ಸರ್ಬಿಯದಲ್ಲಿ ನಡೆದ ಅಂತರರಾಷ್ಟ್ರೀಯ ಚಾಂಪಿಯನ್‌ಷಿ‍ಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿರುವ ಚೈತ್ರಶ್ರೀ, ಬಲ್ಗೇರಿಯಾ,ಹಂಗರಿ, ಮಾಲ್ಡೋವಾ ಹಾಗೂ ಜೆಕ್‌ ಗಣರಾಜ್ಯದಲ್ಲಿ ನಡೆದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. 2019ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಜಿಎಫ್‌ಐ) ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದು ಚೈತ್ರಶ್ರೀಯ ಇತ್ತೀಚಿನ ಸಾಧನೆ.

ಆರಂಭದಲ್ಲಿ ರಾಜೇಂದ್ರನ್‌ ಬಳಿ ತರಬೇತಿ ಪಡೆದಿದ್ದ ಚೈತ್ರಶ್ರೀ, ಕಳೆದ ಹತ್ತು ವರ್ಷಗಳಿಂದ ಮಹಾಲಕ್ಷ್ಮೀ ಹಾಗೂ ಜೈಕುಮಾರ್‌ ಬಳಿ ಕರಾಟೆ ಪಟ್ಟುಗಳನ್ನು ಕಲಿಯುತ್ತಿ
ದ್ದಾರೆ.

ಚೈತ್ರಶ್ರೀ ಅವರ ಸಾಧನೆಗೆ 2018ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಪ್ರಿಯದರ್ಶಿನಿ ಇಂದಿರಾ ಗಾಂಧಿ ರಾಷ್ಟ್ರೀಯ ಪುರಸ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಸಾಧನಾ ರತ್ನ, ಚಾಣಕ್ಯ ಅಂತರರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಒಲಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.