
ಬೆಂಗಳೂರು: ಕೊನೆಯ ಕೆಲವು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಗ್ರ ಶ್ರೇಯಾಂಕದ ನಿರಂಜನ್ ಜೆ.ವಾರಿಯರ್ ಅವರು ಭಾನುವಾರ ಮುಕ್ತಾಯಗೊಂಡ ಗೋಲ್ಡನ್ ಆರಾ ಕರ್ನಾಟಕ ರಾಜ್ಯ ಅಮೆಚೂರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಕೋಣನಕುಂಟೆಯ ಪ್ರೆಸ್ಟೀಜ್ ದೃಶ್ಯಕಲಾ ಕೇಂದ್ರದಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನ ಹತ್ತು ಸುತ್ತುಗಳ ನಂತರ ಬೆಂಗಳೂರಿನ ನಿರಂಜನ್, ಎರಡನೇ ಶ್ರೇಯಾಂಕದ ಅಯಾನ್ ಫುಟಾನೆ, ಮೂರನೇ ಶ್ರೇಯಾಂಕದ ವಿವಾನ್ ಸಚದೇವ ಮತ್ತು ಶಶಾಂಕ್ ಸಾವಂತ್ ಎಂ. ಅವರು ತಲಾ ಎಂಟೂವರೆ ಪಾಯಿಂಟ್ಸ್ ಗಳಿಸಿದ್ದರು. ಆದರೆ ಟೈಬ್ರೇಕರ್ ಆಧಾರದ ಮೇಲೆ ಕ್ರಮವಾಗಿ ಒಂದರಿಂದ ನಾಲ್ಕರವರೆಗಿನ ಸ್ಥಾನಗಳನ್ನು ಪಡೆದರು.
ಬೆಳಗಾವಿಯ ಶ್ರೀಕರ ದರ್ಭಾ, ಬೆಂಗಳೂರಿನ ರುಚಿರ್ ನಡಿಕಟ್ಲ, ಸಿದ್ಧಿ ರಾವ್ ಮತ್ತು ಇಂದ್ರಜಿತ್ ಮಂಜುಂದಾರ್ ತಲಾ ಎಂಟು ಪಾಯಿಂಟ್ಸ್ ಸಂಗ್ರಹಿಸಿದರೂ, ಟೈಬ್ರೇಕರ್ ಆಧಾರದಲ್ಲಿ ಐದರಿಂದ ಎಂಟರವರೆಗಿನ ಸ್ಥಾನ ಪಡೆದರು. ಸಿದ್ಧಿ ರಾವ್ ಮೊದಲ 15ರಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ್ತಿ ಎನಿಸಿದರು.
ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಫಿಡೆ ರೇಟೆಡ್ ಟೂರ್ನಿಯಲ್ಲಿ ರನ್ನರ್ ಆಗಿದ್ದ ನಿರಂಜನ್ ಇಲ್ಲಿ ಟ್ರೋಫಿ ಜೊತೆ ₹25,000 ಬಹುಮಾನ ಪಡೆದರು. 9 ವರ್ಷ ವಯಸ್ಸಿನ ಅಯಾನ್ ಫುಟಾನೆ ರನ್ನರ್‌ಅಪ್ ಟ್ರೋಫಿ ಜೊತೆ ₹18,000 ನಗದು ಬಹುಮಾನ ಪಡೆದರು. ಮೊದಲ 15 ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಯಿತು.
ಅಂತಿಮ ಸುತ್ತಿನಲ್ಲಿ ವಾರಿಯರ್ ಮತ್ತು ಅಯಾನ್ ನಡುವಣ ಪಂದ್ಯ ಡ್ರಾ ಆಯಿತು. ಶಶಾಂಕ್ ಎರಡನೇ ಬೋರ್ಡ್‌ನಲ್ಲಿ ರುಚಿರ್ ವಿರುದ್ಧ , ವಿವಾನ್ ಮೂರನೇ ಬೋರ್ಡ್‌ನಲ್ಲಿ ಇಶಾನ್ ವಿರುದ್ಧ ಜಯಗಳಿಸಿದರು. 13 ವರ್ಷ ವಯಸ್ಸಿನ ಇಂದ್ರಜಿತ್, ಶ್ರೀಸುದಯ್ ಬೆಹೆರಾ ವಿರುದ್ಧ ಜಯಗಳಿಸಿದರು. ಶ್ರೀಕರ್ ಮತ್ತು ಸಿದ್ಧಿ ರಾವ್ ಕೂಡ ತಮ್ಮ ತಮ್ಮ ಪಂದ್ಯಗಳಲ್ಲಿ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.