ADVERTISEMENT

ರಾಜ್ಯಾದ್ಯಂತ ಬ್ಯಾಡ್ಮಿಂಟನ್ ಅಭಿವೃದ್ಧಿಗೆ ಒತ್ತು: ಕುಮಾರ ಬಂಗಾರಪ್ಪ

ಕೆಬಿಎ ನೂತನ ಅಧ್ಯಕ್ಷ ಕುಮಾರ ಬಂಗಾರಪ್ಪ ಆಶಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 15:33 IST
Last Updated 2 ಜನವರಿ 2026, 15:33 IST
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ   

ಬೆಂಗಳೂರು: ‘ಕರ್ನಾಟಕದ ಎಲ್ಲೆಡೆಯೂ ಬ್ಯಾಡ್ಮಿಂಟನ್ ಕ್ರೀಡೆಯನ್ನು ಬೆಳೆಸುವುದು ನಮ್ಮ ಗುರಿ. ಅದಕ್ಕೆ ತಕ್ಕ ಮೂಲಸೌಲಭ್ಯಗಳು ಮತ್ತು ತರಬೇತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡುತ್ತೇವೆ’–

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ನೂತನ ಅಧ್ಯಕ್ಷ ಕುಮಾರ ಬಂಗಾರಪ್ಪ ಅವರ  ನುಡಿಗಳು ಇವು. 

‘ಕರ್ನಾಟಕದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಭವ್ಯವಾದ ಪರಂಪರೆ ಇದೆ. ಪ್ರಕಾಶ್ ಪಡುಕೋಣೆ ಅವರಂತಹ ದಿಗ್ಗಜರು ನಮ್ಮ ಹೆಮ್ಮೆ. ಪುಲ್ಲೇಲ ಗೋಪಿಚಂದ್, ಪಿ.ವಿ. ಸಿಂಧು, ಲಕ್ಷ್ಯ ಸೇನ್, ಸೈನಾ ನೆಹ್ವಾಲ್ ಅವರಂತಹ ಖ್ಯಾತನಾಮರೂ ಇಲ್ಲಿ ಹಲವು ಕಾಲ ಅಭ್ಯಾಸ ಮಾಡಿದ್ದಾರೆ. ತರಬೇತಿ ಪಡೆದಿದ್ದಾರೆ. ಆ ಘನತೆಯನ್ನು ಮರುಸ್ಥಾಪಿಸುವುದು ನಮ್ಮ ಧ್ಯೇಯವಾಗಿದೆ. ರಾಜ್ಯದ ಎಲ್ಲೆಡೆಯೂ ಬಹಳಷ್ಟು ಪ್ರತಿಭಾನ್ವಿತರು ಇದ್ದಾರೆ. ಆದ್ದರಿಂದ ಬೆಂಗಳೂರು ಅಷ್ಟೇ ಅಲ್ಲ, ಹೊರಗಿನ ಜಿಲ್ಲೆಗಳಲ್ಲಿ ಇರುವ ಆಸಕ್ತರಿಗೆ ಉತ್ತಮ ಅವಕಾಶ ಒದಗಿಸಿಕೊಡಬೇಕಿದೆ. ಪ್ರಥಮವಾಗಿ  ಎಲ್ಲ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಬೇಕಿದೆ’ ಎಂದರು. 

ADVERTISEMENT

‘ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್‌ಗಳನ್ನು ಸಿದ್ಧಗೊಳಿಸುತ್ತೇವೆ. ನುರಿತ ತರಬೇತುದಾರರನ್ನು ನಿಯೋಜಿಸುವುದು. ಫಿಟ್‌ನೆಸ್ ಅಥವಾ ಆರೋಗ್ಯ ನಿರ್ವಹಣೆಗಾಗಿ ಬ್ಯಾಡ್ಮಿಂಟನ್ ಆಡುವವರು ಎಲ್ಲೆಡೆಯೂ ಬಹಳಷ್ಟು ಜನರಿದ್ದಾರೆ.  ಅಂತಹವರಲ್ಲಿಯೂ ಉನ್ನತಮಟ್ಟದ ಸಾಧನೆ ಮಾಡುವ ಸಾಮರ್ಥ್ಯ ಇರುವವರು ಇರುತ್ತಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಆದ್ದರಿಂದ ಪ್ರತಿಭಾಶೋಧ ವ್ಯವಸ್ಥೆಗೆ ಒತ್ತು ನೀಡುತ್ತೇವೆ’ ಎಂದರು. 

‘ಕ್ರಿಕೆಟ್‌ ಸಂಸ್ಥೆಯ ಮಾದರಿಯಲ್ಲಿ ಆಟಗಾರರ ಫಿಟ್‌ನೆಸ್, ಗಾಯದ ನಿರ್ವಹಣೆಗೆ ಸುಸಜ್ಜಿತ ಕೇಂದ್ರ ಆರಂಭಿಸುವುದು. ಆಟಗಾರರ ಚಿಕಿತ್ಸೆ ಮತ್ತು ಆರೈಕೆಗಾಗಿ ಪ್ರಮುಖ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನೆರವು ಒದಗಿಸಲಾಗುವುದು. ಅಲ್ಲದೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸೇರಿದಂತೆ ಇನ್ನಿತರ ಕ್ರೀಡಾ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡು ಆಟಗಾರರಿಗೆ ಅನುಕೂಲ ಕಲ್ಪಿಸುವುದಾಗಿದೆ’ ಎಂದು ಮಾಜಿ ಸಚಿವರೂ ಆಗಿರುವ ಕುಮಾರ್ ಬಂಗಾರಪ್ಪ ಹೇಳಿದರು.  

ಈ ಸಂದರ್ಭದಲ್ಲಿ ಹಾಜರಿದ್ದ ಅಂತರರಾಷ್ಟ್ರೀಯ ಮಾಜಿ ಆಟಗಾರ ಅನೂಪ್ ಶ್ರೀಧರ್, ‘ನಾವು ಇವತ್ತು ಏನೇ ಇದ್ದರೂ ಅದು ಬ್ಯಾಡ್ಮಿಂಟನ್ ಕ್ರೀಡೆಯಿಂದ. ಆದ್ದರಿಂದ ಈಗ ಈ ಕ್ರೀಡೆಗೆ ನಮ್ಮ ಅನುಭವ ಮತ್ತು ಸೇವೆಯನ್ನು ಧಾರೆಯೆರೆಯಲು ಸಿದ್ಧರಾಗಿದ್ದೇವೆ. ಆಟಗಾರರ ಸಮಸ್ಯೆಗಳು ಮತ್ತು ಅವಶ್ಯಕತೆಗಳ ಅರಿವು ನಮಗೆ ಇದೆ. ಆದ್ದರಿಂದ ಆಟಗಾರರೂ ನಮ್ಮೊಂದಿಗೆ ಮುಕ್ತವಾಗಿ ಬೆರೆತು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.  

ಈ ಸಂದರ್ಭದಲ್ಲಿ ಕಾರ್ಯದರ್ಶಿ  ವಿ.ಮುರಳೀಧರ್, ಖಜಾಂಚಿ ಜಿ.ಎಂ. ನಿಶ್ಚಿತಾ, ಆಡಳಿತ ಸಮಿತಿ ಸದಸ್ಯರಾದ ಎನ್.ಸಿ. ಶ್ರೀಧರ್, ಡಿ. ಗುರುಪ್ರಸಾದ್, ನಿಶಾಂತ್ ಹಿರೇಮಠ, ಬಿ.ಆರ್. ಹರೀಶಕುಮಾರ್ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.