ADVERTISEMENT

ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಚಾಂಪಿಯನ್‌ ಪಟ್ಟ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 14:20 IST
Last Updated 29 ಡಿಸೆಂಬರ್ 2025, 14:20 IST
ನೆಟ್‌ಬಾಲ್
ನೆಟ್‌ಬಾಲ್   

ಮಂಗಳೂರು: ಅಂತಿಮ ಕ್ಷಣದ ವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಪಟ್ಟುಬಿಡದೆ ಸೆಣಸಿದ ಕರ್ನಾಟಕ ಬಾಲಕಿಯರ ತಂಡದವರು ಸ್ಕೂಲ್ ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ‍ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಬಾಲಕರ ವಿಭಾಗದಲ್ಲಿ ಕರ್ನಾಟಕ ರನ್ನರ್ ಅಪ್ ಆಯಿತು. 

ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ವಾಮಂಜೂರಿನ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕ 30–26ರಲ್ಲಿ ಕೇರಳವನ್ನು ಮಣಿಸಿತು. 

ಲೀಗ್ ಪಂದ್ಯಗಳ ಹಂತದಿಂದಲೇ ಅಮೋಘ ಆಟ ಪ್ರದರ್ಶಿಸುತ್ತ ಬಂದಿರುವ ಆತಿಥೇಯ ಕಾಲೇಜಿನ ನಿಖಿತಾ ನಾಯಕತ್ವದ ತಂಡಕ್ಕೆ ಫೈನಲ್‌ನಲ್ಲಿ ಕೇರಳದ ಬಾಲಕಿಯರು ಪ್ರಬಲ ಪೈಪೋಟಿ ನೀಡಿದರು. ಆದರೆ ಕರ್ನಾಟಕ ತಂಡ ಆಕ್ರಮಣದ ಜೊತೆಯಲ್ಲಿ ಎಚ್ಚರಿಕೆಯ ಆಟವನ್ನೂ ಪ್ರದರ್ಶಿಸಿ ಜಯ ತಮ್ಮದಾಗಿಸಿಕೊಂಡರು. 

ADVERTISEMENT

ಮಹಾರಾಷ್ಟ್ರವನ್ನು 39–17ರಲ್ಲಿ ಮಣಿಸಿದ ಪಂಜಾಬ್ ಮೂರನೇ ಸ್ಥಾನ ಗಳಿಸಿತು. ನಿತ್ಯಾಶ್ರೀ, ಇಂದು ಜಿ, ನಿಸರ್ಗ ಎಚ್.ಎಸ್, ಸಿಂಚನಾ, ರಕ್ಷಾ, ಸುಪ್ರಿಯಾ ಎಚ್.ಎಸ್, ದೀಪ್ತಿ, ಹರ್ಷಿತಾ ಎಲ್, ಅನ್ವಿತಾ, ನಿಕಿತಾ, ಲಾವಣ್ಯ, ಲಕ್ಷ್ಮೀ ಮಹಾದೇವ, ಸಾಹಿತ್ಯ ಎಂ.ಗೊಂಡಬಾಳ, ಸಂಧ್ಯಾ, ಹೇಮಾ ಮಣ್ಣೂರ, ತಪಸ್ಯಾ ನಾಯಕ್ ಮತ್ತು ದಿವ್ಯಾ ತಂಡದಲ್ಲಿದ್ದರು. 

ಬಾಲಕರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕ ಕೆಚ್ಚೆದೆಯಿಂದ ಹೋರಾಡಿ ವೀರೋಚಿತ ಸೋಲು ಅನುಭವಿಸಿತು. ಪಂಜಾಬ್ 37–35ರಲ್ಲಿ ಗೆಲುವು ದಾಖಲಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚಂಡೀಗಢವನ್ನು ಕೇರಳ 34–16ರಲ್ಲಿ ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.