ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್ ಅವರು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 40ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 20 ವರ್ಷದೊಳಗಿನ ಮಹಿಳೆಯರ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದರು.
ವೈಷ್ಣವಿ ಅವರು ಫೈನಲ್ ಸ್ಪರ್ಧೆಯಲ್ಲಿ 4 ನಿಮಿಷ 29.19 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮಧ್ಯ ಪ್ರದೇಶದ ರಾಧಾ ಯಾದವ್ (4:29.19) ಮತ್ತು ರಾಜಸ್ಥಾನದ ಮಂಜು ಚೌಧರಿ (4:30.93) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
18 ವರ್ಷದೊಳಗಿನ ಪುರುಷರ 100 ಮೀ. ಓಟದಲ್ಲಿ ರಾಜ್ಯದ ಚಿರಂತ್ ಪಿ. ಮತ್ತು ಸವಿನ್ ತಿಂಗಳಾಯ ಕ್ರಮ ವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು. 10.71 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚಿರಂತ್ ಅವರು ಕೂದಲೆಳೆಯ ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡರು. ಅದೇ ಸಮಯದಲ್ಲಿ ಗುರಿ ತಲುಪಿದ್ದ ಮಹಾರಾಷ್ಟ್ರದ ಆದಿತ್ಯ ಫೈಸಲ್, ಫೋಟೊ ಫಿನಿಷ್‌ನಲ್ಲಿ ಚಿನ್ನ ಗೆದ್ದರು.
14 ವರ್ಷದೊಳಗಿನ ಟ್ರಯಥ್ಲಾನ್‌ನಲ್ಲಿ ಕರ್ನಾಟಕದ ಅದ್ವಿಕಾ ಕೆ.ಪಿ. (2739 ಅಂಕ) ಕಂಚಿನ ಪದಕ ಗೆದ್ದರು.
ಹಿಮಾಂಶು ದಾಖಲೆ: ಹರಿಯಾಣದ ಹಿಮಾಂಶು ಜಾಖಡ್ ಅವರು ಪುರುಷರ 18 ವರ್ಷದೊಳಗಿನವರ ವಿಭಾಗದ ಜಾವೆಲಿನ್ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದು, 20 ವರ್ಷದೊಳಗಿನ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದರು. ಹಿಮಾಂಶು ಅರ್ಹತಾ ಸುತ್ತಿನಲ್ಲಿ 700 ಗ್ರಾಂ ತೂಕದ ಜಾವೆಲಿನ್ ಅನ್ನು 79.96 ಮೀಟರ್ ದೂರಕ್ಕೆ ಎಸೆದರು. ಈ ಮೂಲಕ 2014ರಲ್ಲಿ ವಿಜಯವಾಡದಲ್ಲಿ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮಾಡಿದ್ದ (76.50 ಮೀ) ದಾಖಲೆ ಮುರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.