ADVERTISEMENT

ಕರ್ನಾಟಕ ಮಿನಿ ಗೇಮ್ಸ್‌ | ರಿಲೆ: ಮೈಸೂರು ಬಾಲಕರ ಪಾರಮ್ಯ

ಅಮಿತ್‌ಗೆ ಜಾವೆಲಿನ್‌ ಚಿನ್ನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 15:22 IST
Last Updated 6 ನವೆಂಬರ್ 2025, 15:22 IST
ಬಾಲಕರ 4x100 ಮೀಟರ್‌ ರಿಲೆನಲ್ಲಿ ಸ್ಪರ್ಧಿಗಳು ಗುರಿಯತ್ತ ಧಾವಿಸಿದರು
ಬಾಲಕರ 4x100 ಮೀಟರ್‌ ರಿಲೆನಲ್ಲಿ ಸ್ಪರ್ಧಿಗಳು ಗುರಿಯತ್ತ ಧಾವಿಸಿದರು   

ಬೆಂಗಳೂರು: ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಗೇಮ್ಸ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ 4x100 ಮೀಟರ್‌ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮೆರೆದವು.

ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಆಶ್ರಯದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ಮೈಸೂರಿನ ಬಾಲಕರು 49.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಅಗ್ರಸ್ಥಾನಿಯಾದರು. ದಕ್ಷಿಣ ಕನ್ನಡ (50.10ಸೆ) ಮತ್ತು ಬೆಳಗಾವಿ (51.44ಸೆ) ತಂಡಗಳು ಕ್ರಮವಾಗಿ ನಂತರದ ಸ್ಥಾನ ಗಳಿಸಿದವು. 

ದಕ್ಷಿಣ ಕನ್ನಡದ ಬಾಲಕಿಯರು 53.19 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಬೆಂಗಳೂರು ದಕ್ಷಿಣ ತಂಡ (54.91ಸೆ) ಬೆಳ್ಳಿ ಮತ್ತು ಉತ್ತರ ಕನ್ನಡ ತಂಡ (55.18ಸೆ) ಕಂಚಿನ ಪದಕ ಗೆದ್ದುಕೊಂಡಿತು.

ADVERTISEMENT

ಬಾಲಕರ 60 ಮೀಟರ್ ಸ್ಪ್ರಿಂಟ್‌ ಸ್ಪರ್ಧೆಯಲ್ಲಿ ಉಡುಪಿಯ ಪ್ರಕುಲ್ ಕೆ. ಕುಂದರ್ (7.32ಸೆ) ಚಾಂಪಿಯನ್‌ ಆದರು. ಮೈಸೂರಿನ ಚಂದಾಸ್ ಗೌಡ ಸಿ. ಮತ್ತು ಬೆಂಗಳೂರಿನ ಇಶಾನ್‌ ಕೆ. ಕ್ರಮವಾಗಿ ನಂತರದ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಅದ್ವಿಕಾ (8.29ಸೆ) ಚಿನ್ನ ಗೆದ್ದರೆ, ಉಡುಪಿಯ ಸಾನಿಧ್ಯ ಶೇಟ್‌ ಬೆಳ್ಳಿ, ಮಾನಿಕಾ ಆದ್ಯ ಕಂಚು ಕೊರಳಿಗೇರಿಸಿಕೊಂಡರು.

ಬಾಲಕರ 200 ಮೀ. ಓಟದಲ್ಲಿ ಮೈಸೂರಿನ ಆದರ್ಶ್ ಆರ್. (24.18 ಸೆ) ಪ್ರಶಸ್ತಿ ಗೆದ್ದರೆ, ದಕ್ಷಿಣ ಕನ್ನಡದ ಆರ್. ಕೌಶಲ್ ಬೆಳ್ಳಿ ಮತ್ತು ಚಿತ್ರದುರ್ಗದ ಸುಭಾಷ್ ಆರ್. ಕಂಚಿನ ಪದಕ ಜಯಿಸಿದರು. ಬಾಲಕಿಯರ 400 ಮೀ. ಓಟದಲ್ಲಿ ಉತ್ತರ ಕನ್ನಡದ ಪೂರ್ವಿ ಟಿ. ಹರಿಕಾಂತರ (1ನಿ.0.47ಸೆ)  ಸ್ವರ್ಣ ಗೆದ್ದರು. ಬೆಳಗಾವಿಯ ಮಾಧುರಿ ಗಜಾನನ್ ಪಾಟೀಲ ಮತ್ತು ಬಾಗಲಕೋಟೆಯ ಮೇಘಾ ನಂತರದ ಸ್ಥಾನ ಗಳಿಸಿದರು.

ಬಾಲಕರ 600 ಮೀಟರ್‌ ಓಟದಲ್ಲಿ ಧಾರವಾಡದ ಸಂದೀಪ್ ಯಲ್ಲಪ್ಪ ವಡ್ಡರ್ (1ನಿ.29ಸೆ) ಚಿನ್ನ ಗೆದ್ದರು. ಬೆಳಗಾವಿಯ ವೀರಾಜ್ ಮೋನಪ್ಪ ಕುಗಾಜಿ ಮತ್ತು ಹಾಸನದ ಸಿದ್ಧಾಂತ್ ಕೆ.ವೈ. ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆಯ ಮೇಘಾ ಅಶೋಕ್ ಪೂಜಾರಿ (1ನಿ.42ಸೆ) ಚಾಂಪಿಯನ್‌ ಆದರೆ, ಶಿವಮೊಗ್ಗದ ಸ್ಫೂರ್ತಿ ಆರ್. ಬೆಳ್ಳಿ ಮತ್ತು ಉಡುಪಿಯ ಧನ್ವಿ ಎಸ್. ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. 

ಬಾಲಕಿಯರ ಶಾಟ್‌ಪುಟ್‌ನಲ್ಲಿ ಹಾಸನದ ಶರಣ್ಯಾ (8.7 ಮೀ) ಸ್ವರ್ಣ ಗೆದ್ದರು. ಚಾಮರಾಜನಗರದ ಮರ್ಯಂ ಮೊಹಮ್ಮದ್, ಧಾರವಾಡದ ದೀಪಿಕಾ ವಿಜಯಕುಮಾರ್ ಚವ್ಹಾಣ್‌ ಕ್ರಮವಾಗಿ ನಂತರದ ಸ್ಥಾನ ಗಳಿಸಿದರು. 

ಬಾಲಕರ ಲಾಂಗ್ ಜಂಪ್‌ನಲ್ಲಿ ದಕ್ಷಿಣ ಕನ್ನಡದ ಸ್ಪರ್ಧಿಗಳು ಪಾರಮ್ಯ ಮೆರೆದರು. ಪ್ರಣವ್ ಎಸ್. 5.52 ಮೀ. ದೂರ ಜಿಗಿದು ಚಿನ್ನ ಗೆದ್ದರು. ಪ್ರಸಿದ್ಧ್ ನವೀನ್ ರಾವ್ ಬೆಳ್ಳಿ ಜಯಿಸಿದರು. ಉಡುಪಿಯ ಸುಮೀಶ್ ಸುಕೇಶ್ ಕುಮಾರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಬಾಲಕರ ಜಾವೆಲಿನ್ ಥ್ರೋದಲ್ಲಿ ಶಿವಮೊಗ್ಗ ಸ್ಪರ್ಧಿಗಳು ಆಧಿಪತ್ಯ ಸಾಧಿಸಿದರು. ಅಮಿತ್ ಎಸ್‌.ಪಿ. (33.66 ಮೀ) ಸ್ವರ್ಣ, ಪುನೀತ್ ರಜತ ಗೆದ್ದರು. ಚಿಕ್ಕಬಳ್ಳಾಪುರದ ಎಸ್ ಧೀರಜ್ ಕಂಚು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.