ಮಂಗಳೂರು: ದಕ್ಷಿಣ ಕನ್ನಡದ ಲಕ್ಷಿತ್ ಸಾಲ್ಯಾನ್ ಮತ್ತು ಆಗಸ್ಟಿನ್ ಕರ್ನಾಟಕ ರಾಜ್ಯ ಮುಕ್ತ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶನಿವಾರ ಅಗ್ರ ಸ್ಥಾನವನ್ನು ಹಂಚಿಕೊಂಡರು. ಅಗ್ರ ಶ್ರೇಯಾಂಕಿತ ಮಂಗಳೂರಿನ ಶರಣ್ ರಾವ್ 3ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ಟೂರ್ನಿಯಲ್ಲಿ ದಿನದ ಎಲ್ಲ ಸುತ್ತುಗಳನ್ನು ಗೆದ್ದ 10ನೇ ಶ್ರೇಯಾಂಕದ ಲಕ್ಷಿತ್ ಮತ್ತು 4ನೇ ಶ್ರೇಯಾಂಕದ ಆಗಸ್ಟಿನ್ ತಲಾ 6 ಪಾಯಿಂಟ್ ಕಲೆ ಹಾಕಿದ್ದು ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಲಕ್ಷಿತ್ ಮುಂದೆ ಇದ್ದಾರೆ.
1905 ರೇಟಿಂಗ್ ಹೊಂದಿರುವ ಲಕ್ಷಿತ್ ಮೊದಲ 4 ಸುತ್ತುಗಳಲ್ಲಿ ತಮಗಿಂತ ಕಡಿಮೆ ರ‍್ಯಾಂಕಿಂಗ್‌ನ ಆಟಗಾರರನ್ನು ಮಣಿಸಿದರು. 5ನೇ ಸುತ್ತಿನಲ್ಲಿ 2116 ರ‍್ಯಾಂಕಿಂಗ್‌ನ ಪ್ರಜ್ವಲ್ ಶೇಟ್ ಮತ್ತು ನಂತರದ ಸುತ್ತಿನಲ್ಲಿ ಪ್ರತೀತಿ ಬೊರ್ಡೊಲಿ (1958) ವಿರುದ್ಧ ಜಯ ಸಾಧಿಸಿದರು. ಆಗಸ್ಟಿನ್ (1984) ಅವರಿಗೆ ಪ್ರತಿ ಸುತ್ತಿನಲ್ಲೂ ಕಡಿಮೆ ರ‍್ಯಾಂಕಿಂಗ್‌ನ ಆಟಗಾರರು ಎದುರಾಳಿಗಳಾಗಿದ್ದರು. ಭಾನುವಾರದ ಮೊದಲ ಸುತ್ತಿನಲ್ಲಿ ಇವರಬ್ಬರ ಮುಖಾಮುಖಿ ಕುತೂಹಲ ಕೆರಳಿಸಿದೆ.
ಶರಣ್ ರಾವ್ (2284) ನಾಲ್ಕನೇ ಸುತ್ತಿನಲ್ಲಿ ಆಘಾತ ಅನುಭವಿಸಿದರು. ಈ ಸುತ್ತಿನಲ್ಲಿ ಬಾಲ ಪ್ರತಿಭೆ, 16ನೇ ಶ್ರೇಯಾಂಕಿತ ಆರವ್ ಸರ್ಬಾಲಿಯ (1831) ಜೊತೆ ಡ್ರಾ ಮಾಡಿಕೊಂಡ ಅವರು ಉಳಿದೆಲ್ಲ ಸುತ್ತುಗಳನ್ನು ಗೆದ್ದು 5.5 ಪಾಯಿಂಟ್ ಗಳಿಸಿದರು. ಭಾನುವಾರ ಮೊದಲ ಸುತ್ತಿನಲ್ಲಿ ಅವರು 3ನೇ ಶ್ರೇಯಾಂಕದ ಪ್ರಜ್ವಲ್ ಶೇಟ್ ಎದುರು ಆಡಲಿದ್ದಾರೆ.
ಪ್ರತೀತಿ ಬೊರ್ಡೊಲಿ, ಪ್ರಜ್ವಲ್ ಶೇಟ್ ಮತ್ತು ಆರವ್ ಸರ್ಬಾಲಿಯಾ ಸೇರಿದಂತೆ 15 ಆಟಗಾರರು ಮೊದಲ ದಿನ 5 ಪಾಯಿಂಟ್ ಗಳಿಸಿದ್ದು 2ನೇ ಶ್ರೇಯಾಂಕಿತೆ ಇಶಾ ಶರ್ಮಾ ಸೇರಿದಂತೆ 12 ಮಂದಿ 4.5 ಪಾಯಿಂಟ್ ಗಳಿಸಿದ್ದಾರೆ.
ಕೊನೆಯ ಸುತ್ತಿನ ಪ್ರಮುಖ ಫಲಿತಾಂಶಗಳು: ಲಕ್ಷಿತ್ ಸಾಲ್ಯಾನ್‌ಗೆ ಪ್ರತೀತಿ ಬೊರ್ಡೊಲಿ ವಿರುದ್ಧ ಜಯ, ಆಗಸ್ಟಿನ್‌ಗೆ ಲೀಲಾ ಜಯಕೃಷ್ಣ ಎದುರು ಜಯ. ಶರಣ್ ರಾವ್‌ಗೆ ನಂದಕುಮಾರ್ ವೀರೇಶ್ ಎದುರು, ಪ್ರಜ್ವಲ್ ಶೇಟ್‌ಗೆ ಶ್ರೀಯಾಂಶ್ ಸಿನ್ಹಾ ಎದುರು, ವಿಹಾನ್ ಸಚ್‌ದೇವ್‌ಗೆ ವಿಹಾನ್ ಶೆಟ್ಟಿ ಎದುರು, ಸುದರ್ಶನ್‌ಗೆ ಮಹಮ್ಮದ್ ಇರ್ಫಾನ್ ಎದುರು, ರವೀಶ್ ಕೋಟೆಗೆ ಅಯಾನ್ ಎದುರು, ಅದ್ರಿಜ್ ಭಟ್ಟಾಚಾರ್ಯಗೆ ಪ್ರಣವ್ ಎ.ಜೆ ಎದುರು, ಜಾಗೃತ್ ಆನಂದ್ ದೇವಾಡಿಗಗೆ ಆರುಷ್ ಭಟ್ ಎದುರು ಗೆಲುವು. ಆರವ್ ಸರ್ಬಾಲಿಯ ಮತ್ತು ಗಣೇಶ್ ಕಾಮತ್, ಇಶಾ ಶರ್ಮಾ ಮತ್ತು ಸ್ರಗ್ವಿದಾ, ರಿತೇಶ್ ಮತ್ತು ಶ್ರೀಕರ ದರ್ಬಾ ನಡುವೆ ಡ್ರಾ.