
ಬೆಂಗಳೂರು: ಕರ್ನಾಟಕ ಶೂಟಿಂಗ್ ಲೀಗ್ ಸ್ಪರ್ಧೆಗಾಗಿ ಈಚೆಗೆ ನಡೆಸಿದ ಬಿಡ್ ಪ್ರಕ್ರಿಯೆಯಲ್ಲಿ ಘೋಷಿಸಿದ್ದು ‘ಅಣಕು ಮೌಲ್ಯ’ವಾಗಿದೆ. ಬಿಡ್‌ನಲ್ಲಿ ಘೋಷಣೆ ಮಾಡಿದ ಹಣವನ್ನು ಯಾವುದೇ ಸ್ಪರ್ಧಿಗೂ ನೀಡುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆ ಸ್ಪಷ್ಟನೆ ನೀಡಿದೆ.
‘ಬಿಡ್ಡಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಅಣಕು ಹಣದ ಮೂಲಕ ನಡೆಸಲ್ಪಟ್ಟಿದ್ದು, ಲೀಗ್‌ನ ವಿನ್ಯಾಸ ಮತ್ತು ತಂಡಗಳ ಹಂಚಿಕೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ. ಯಾವುದೇ ಶೂಟರ್‌ಗಳಿಗೆ ಬಿಡ್ಡಿಂಗ್ ವೇಳೆ ಉಲ್ಲೇಖಿಸಲಾದ ಮೊತ್ತವನ್ನು ನೈಜವಾಗಿ ಪಾವತಿಸುವುದಿಲ್ಲ. ರಾಜ್ಯದಲ್ಲಿ ಶೂಟಿಂಗ್ ಕ್ರೀಡೆಯ ಅಭಿವೃದ್ಧಿ ಮತ್ತು ಯುವ ಪ್ರತಿಭೆಗಳಿಗೆ ಉತ್ತಮ ಸ್ಪರ್ಧಾತ್ಮಕ ವೇದಿಕೆ ಒದಗಿಸುವ ಉದ್ದೇಶದಿಂದ ಈ ಲೀಗ್ ಅನ್ನು ಆಯೋಜಿಸಲಾಗಿದೆ’ ಎಂದು ರೈಫಲ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
‘ಕರ್ನಾಟಕ ಶೂಟಿಂಗ್ ಲೀಗ್’ ಇದೇ 28 ಮತ್ತು ಮಾರ್ಚ್ 1ರಂದು ಮೈಸೂರು ರಸ್ತೆಯ ಸಾಯ್ ಆವರಣದಲ್ಲಿ ನಡೆಯಲಿದೆ.
ಲೀಗ್‌ನಲ್ಲಿ ಎಂಟು ಫ್ರ್ಯಾಂಚೈಸಿಗಳ ತಂಡಗಳು ಸ್ಪರ್ಧಿಸಲಿವೆ. ಮಂಗಳವಾರ ನಡೆದ ಅಣಕು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸಿಗಳು ತಮ್ಮ ತಂಡಕ್ಕೆ ತಲಾ 11 ಶೂಟರ್‌ಗಳನ್ನು ಆಯ್ಕೆ ಮಾಡಿಕೊಂಡವು.
‘ಸಂಸ್ಥೆಯು ಬಿಡ್ ಪ್ರಕ್ರಿಯೆಯಲ್ಲಿ ಬಿಡ್ ಮೊತ್ತ ಪ್ರಕಟಿಸಲಾಗಿದೆ. ಅದನ್ನು ಮಾಧ್ಯಮಗಳ ಮೂಲಕ ಪ್ರಚಾರ ಕೂಡ ಮಾಡಲಾಗಿದೆ. ಆದರೆ ನಿಜವಾಗಿ ಹಣ ಕೊಡುವುದಿಲ್ಲ. ಇದರಿಂದಾಗಿ ನಮ್ಮ ಮಕ್ಕಳಿಗೆ ಪ್ರಾಯೋಜಕರು ಹಣ ವಿನಿಯೋಗಿಸಲು ಮುಂದೆ ಬರುತ್ತಿಲ್ಲ. ಬಿಡ್ ಹಣ ಸಿಕ್ಕಿದೆ ಸಾಕಲ್ಲ. ಮತ್ತೇಕೆ ಪ್ರಾಯೋಜಕತ್ವ ಬೇಕು ಎನ್ನುತ್ತಿದ್ದಾರೆ’ ಎಂದು ಶೂಟರ್‌ವೊಬ್ಬರ ಪಾಲಕರು (ಹೆಸರು ಗೋಪ್ಯವಾಗಿಡಲು ಕೋರಿದ್ದಾರೆ) ಪ್ರಜಾವಾಣಿಗೆ ದೂರಿದರು.
ಈ ಹಿನ್ನಲೆಯಲ್ಲಿ ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.