ADVERTISEMENT

ವಿಶ್ವಕಪ್ ಚೆಸ್‌ ಟೂರ್ನಿ: 32ರ ಸುತ್ತಿಗೆ ಕಾರ್ತಿಕ್ ವೆಂಕಟರಾಮನ್

ವಿದಿತ್ ಗುಜರಾತಿ, ನಾರಾಯಣನ್ ಸವಾಲು ಅಂತ್ಯ

ಪಿಟಿಐ
Published 9 ನವೆಂಬರ್ 2025, 15:59 IST
Last Updated 9 ನವೆಂಬರ್ 2025, 15:59 IST
<div class="paragraphs"><p>ಕಾರ್ತಿಕ್ ವೆಂಕಟರಾಮನ್</p></div>

ಕಾರ್ತಿಕ್ ವೆಂಕಟರಾಮನ್

   

ಪಣಜಿ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕಾರ್ತಿಕ್ ವೆಂಕಟರಾಮನ್ ಅವರು ವಿಶ್ವಕಪ್ ಚೆಸ್‌ ಟೂರ್ನಿಯ ಮೂರನೇ ಸುತ್ತಿನ ಟೈಬ್ರೇಕರ್‌ನಲ್ಲಿ ರುಮೇನಿಯಾದ ಡೇನಿಯಲ್‌ ಡೀಕ್ ಬೊಗ್ದಾನ್ ಅವರನ್ನು 2.5–1.5 ರಿಂದ ಸೋಲಿಸಿ ಅಂತಿಮ 32ರ ಹಂತಕ್ಕೆ ಮುನ್ನಡೆದರು. ಆದರೆ ಭಾರತದ ಇನ್ನಿಬ್ಬರ ಗ್ರ್ಯಾಂಡ್‌ಮಾಸ್ಟರ್‌ಗಳಾದ ವಿದಿತ್ ಸಂತೋಷ್‌ ಗುಜರಾತಿ ಮತ್ತು ಎಸ್‌.ನಾರಾಯಣನ್ ಅವರ ಸವಾಲು ಅಂತ್ಯಗೊಂಡಿತು.

ಕ್ಲಾಸಿಕಲ್ ಸುತ್ತಿನ ಪಂದ್ಯ 1–1 ಡ್ರಾ ಮಾಡಿಕೊಂಡಿದ್ದ ಆಟಗಾರರು ಭಾನುವಾರ ಟೈಬ್ರೇಕರ್ ಪಂದ್ಯಗಳನ್ನು ಆಡಿದರು. ಕಾರ್ತಿಕ್ ಮೊದಲ ಆಟ ಡ್ರಾ ಮಾಡಿಕೊಂಡರೆ, ಎರಡನೇ ಆಟದಲ್ಲಿ ಬೊಗ್ದಾನ್ ಅವರನ್ನು ಮಣಿಸಿದರು. 

ADVERTISEMENT

ಇದರೊಂದಿಗೆ ಭಾರತದ ಐವರು ಆಟಗಾರರು ಅಂತಿಮ 32ರ ಸುತ್ತನ್ನು ತಲುಪಿದಂತಾಗಿದೆ. ಎರಡನೇ ಶ್ರೇಯಾಂಕದ ಅರ್ಜುನ್ ಇರಿಗೇಶಿ, ಮೂರನೇ ಶ್ರೇಯಾಂಕದ ಪ್ರಜ್ಞಾನಂದ ರಮೇಶಬಾಬು, ಪೆಂಟಾಲ ಹರಿಕೃಷ್ಣ ಮತ್ತು ವಿಶ್ವ ಜೂನಿಯರ್ ಚಾಂಪಿಯನ್ ವಿ.ಪ್ರಣವ್  ಶನಿವಾರವೇ (ಕ್ಲಾಸಿಕಲ್ ಸುತ್ತಿನ ಬಳಿಕ) ಅಂತಿಮ 32ರ ಸುತ್ತು ಖಚಿತಪಡಿಸಿಕೊಂಡಿದ್ದರು.

ಅಮೆರಿಕದ ಸ್ಯಾಮ್ ಶಂಕ್ಲಾಂಡ್‌ ಅವರು ಎರಡನೇ ಸುತ್ತಿನ ಟೈಬ್ರೇಕರ್‌ವರೆಗೆ ಆಡಿ 3.5–2.5 ರಿಂದ ವಿದಿತ್ ಗುಜರಾತಿ ಅವರನ್ನು ಸೋಲಿಸಿದರು. ಮೊದಲ ಸುತ್ತಿನ ಟೈಬ್ರೇಕರ್‌ನಲ್ಲಿ ಇಬ್ಬರೂ ಒಂದೊಂದು ಆಟ ಗೆದ್ದರು. ಎರಡನೇ ಸುತ್ತಿನ ಟೈಬ್ರೇಕರ್‌ನ ಮೊದಲ ಆಟ ಡ್ರಾ ಆದರೆ, ಎರಡನೇ ಆಟದಲ್ಲಿ ಶಂಕ್ಲಾಂಡ್‌ ಜಯಗಳಿಸಿದರು.

ಚೀನಾದ ಯು ಯಾಂಗ್‌ಯಿ ಇನ್ನೊಂದು ಪಂದ್ಯದಲ್ಲಿ 2.5– 1.5 ರಿಂದ ಎಸ್‌.ನಾರಾಯಣನ್‌ ಅವರನ್ನು ಮಣಿಸಿದರು. 

ಹಂಗೆರಿಯ ರಿಚರ್ಡ್‌ ರ್‍ಯಾಪೋರ್ಟ್‌, ಚೀನಾದ ವೀ ಯಿ, ಸರ್ಬಿಯಾದ ಅಲೆಕ್ಸಿ ಸರನ, ಅಮೆರಿಕದ ಸ್ಯಾಮುಯೆಲ್ ಸೆವಿನ್‌, ರಷ್ಯಾದ ಆಂಡ್ರಿ ಎಸೆಪೆಂಕೊ, ಡೇನಿಯಲ್ ದುಬೋವ್‌, ಉಜ್ಬೇಕಿಸ್ತಾನದ ನದಿರ್ಬೆಕ್‌ ಯಾಕುಬೊವ್ ಅವರೂ ನಾಲ್ಕನೇ ಸುತ್ತು ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.