ಮನು ಭಾಕರ್
(ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್)
ನವದೆಹಲಿ: ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ಭಾರತದ ಮಹಿಳಾ ಶೂಟರ್ ಮನು ಭಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಶೂಟರ್ ಮನು ಭಾಕರ್ ಅವರನ್ನು ಈ ವರ್ಷದ ಅತ್ಯುನ್ನತ ಕ್ರೀಡಾ ಗೌರವ ‘ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ ಎಂದು ವರದಿಯಾಗಿತ್ತು.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮನು ಭಾಕರ್, ‘ನಾಮನಿರ್ದೇಶನ ಮಾಡುವ ವೇಳೆ ನನ್ನ ಕಡೆಯಿಂದ ಕೆಲವೊಂದು ಲೋಪಗಳಾಗಿವೆ. ಪ್ರಶಸ್ತಿ ಸಿಕ್ಕರೂ ಸಿಗದಿದ್ದರೂ ದೇಶಕ್ಕಾಗಿ ಸಾಧನೆ ಮಾಡುವುದೇ ನನ್ನ ಗುರಿ’ ಎಂದು ಹೇಳಿದ್ದಾರೆ.
‘ಪ್ರಶಸ್ತಿಗಳು ಮತ್ತು ಗುರುತಿಸುವಿಕೆ ನನ್ನನ್ನು ಪ್ರೇರೇಪಿಸುತ್ತದೆ. ಆದರೆ, ಅದು ನನ್ನ ಗುರಿಯನ್ನಲ್ಲ’ ಎಂದು ಭಾಕರ್ ಪ್ರತಿಪಾದಿಸಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 22 ವರ್ಷ ವಯಸ್ಸಿನ ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಅಥ್ಲೀಟ್ ಎಂಬ ದಾಖಲೆಗೆ ಪಾತ್ರರಾಗಿದ್ದರು.
‘ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಶಿಫಾರಸುಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಪರಿಶೀಲಿಸಿ ನಿರ್ಧರಿಸುತ್ತಾರೆ. ಮನು ಭಾಕರ್ ಅವರ ಹೆಸರು ಅಂತಿಮ ಪಟ್ಟಿಯಲ್ಲಿರುವ ಸಾಧ್ಯತೆಯಿದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಅರ್ಜಿ ಸಲ್ಲಿಸಿಲ್ಲ ಎಂಬ ಕ್ರೀಡಾ ಸಚಿವಾಲಯದ ಹೇಳಿಕೆಯನ್ನು ಅಲ್ಲಗಳೆದಿರುವ ಮನು ತಂದೆ ರಾಮ್ ಕಿಶನ್ ಭಾಕರ್, ‘ನಾವು ಕ್ರಮಬದ್ಧವಾಗಿ ಅರ್ಜಿ ಹಾಕಿದ್ದೇವೆ. ಕಳೆದ 2-3 ವರ್ಷಗಳಿಂದ ನಿರಂತರವಾಗಿ ಖೇಲ್ ರತ್ನ, ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಎಲ್ಲಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪುರಾವೆ ನಮ್ಮ ಬಳಿ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.