ADVERTISEMENT

ಖೇಲೊ ಇಂಡಿಯಾ ಕ್ರೀಡಾಕೂಟದ ಲಾಂಛನ ಬಿಡುಗಡೆ: ಸಿಂಥೆಟಿಕ್ ಟ್ರ್ಯಾಕ್ ಸಿದ್ಧ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 19:30 IST
Last Updated 1 ಏಪ್ರಿಲ್ 2022, 19:30 IST
ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಲಾಂಛನ ಮತ್ತು ಮೆಸ್ಕಾಟ್‌ ಬಿಡಗಡೆ ಸಮಾರಂಭದಲ್ಲಿ ರಾಜ್ಯದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಲಾಂಛನ ಮತ್ತು ಮೆಸ್ಕಾಟ್‌ ಬಿಡಗಡೆ ಸಮಾರಂಭದಲ್ಲಿ ರಾಜ್ಯದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಕ್ತಿ–ಸಮೃದ್ಧಿಯ ಸಂಕೇತವಾದ ಆನೆ ಮತ್ತು ನವದ್ರಾವಿಡ ವಾಸ್ತುಶಿಲ್ಪ ಶೈಲಿಯದೆಂದು ಹೇಳಲಾಗುವ ವಿಧಾನಸೌಧದ ಚೆಲುವು ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ (ಕೆಇಯುಜಿ) ಲಾಂಛನಕ್ಕೆ ಮೆರುಗು ತುಂಬಿದೆ.

ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯುವ ಸಬಲೀಕರಣ–ಕ್ರೀಡಾ ಇಲಾಖೆಗಳು ಆಯೋಜಿಸಿರುವ ಕ್ರೀಡಾಕೂಟ ಇದೇ 24ರಿಂದ ಮೇ 3ರ ವರೆಗೆ ಉದ್ಯಾನ ನಗರಿಯಲ್ಲಿ ನಡೆಯಲಿದೆ. ಆನೆ ಮತ್ತು ವಿಧಾನಸೌಧ ಕಂಗೊಳಿಸುವ ಲಾಂಛನವನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಲಾಯಿತು. ‘ವೀರ’ ಆನೆ, ‘ಜಯ’ ಹುಲಿ, ‘ವಿಜಯ‘ ಜಿಂಕೆಯನ್ನು ಹೋಲುವ ಮೆಸ್ಕಾಟ್‌ ಮತ್ತು ಖೇಲೊ ಇಂಡಿಯಾ ಯೋಜನೆಯ ಲಾಂಛನದ ಜೆರ್ಸಿಗಳನ್ನು ಕೂಡ ಬಿಡುಗಡೆ ಮಾಡಲಾಯಿತು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಕಿನ ಚಿತ್ತಾರ ಮತ್ತು ಸಂಗೀತದ ಝೇಂಕಾರದ ಸೊಬಗಿನ ಕಾರ್ಯಕ್ರಮದಲ್ಲಿರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಲಾಂಛನ, ಮೆಸ್ಕಾಟ್ ಮತ್ತು ಜೆರ್ಸಿ ಬಿಡುಗಡೆ ಮಾಡಿದರು.

ADVERTISEMENT

‘ಎರಡು ವರ್ಷಗಳ ಹಿಂದೆ ಭುವನೇಶ್ವರದಲ್ಲಿ ಕೆಇಯುಜಿಯ ಮೊದಲ ಆವೃತ್ತಿ ನಡೆದಿತ್ತು. ಆಗ 17 ಸ್ಪರ್ಧೆಗಳು ಇದ್ದವು. ಈ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ಕೂಟದಲ್ಲಿ 20 ಸ್ಪರ್ಧೆಗಳು ಇರುತ್ತವೆ’ ಎಂದು ಗೆಹಲೋತ್ ಹೇಳಿದರು.

ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ‘ಈ ಬಾರಿ ಕ್ರೀಡಾಕೂಟದಲ್ಲಿ 4500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಲು ವಿಶ್ವವಿದ್ಯಾಲಯಗಳು ಪ್ರೇರಣೆಯಾಗಬೇಕು. ಆದರೆ ಭಾರತದಲ್ಲಿ ವಿವಿಗಳು ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡುತ್ತಿವೆ ಎಂದು ಅವರು ‘ಶಿಕ್ಷಣ, ಪರಿಸರ ಮತ್ತು ಕ್ರೀಡೆಯ ಬಗ್ಗೆ ಯುವಜನರು ಸಮಾನ ಆಸಕ್ತಿ ಹೊಂದುವಂತೆ ಮಾಡಲು ವಿವಿಗಳು ಪ್ರಯತ್ನಿಸಬೇಕು’ ಎಂದು ಹೇಳಿದರು.‌

ರಾಜ್ಯದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಮಾತನಾಡಿ ‘ಖೇಲೊ ಇಂಡಿಯಾ ವಿವಿ ಕ್ರೀಡಾಕೂಟಕ್ಕೆ ₹ 50 ಕೋಟಿ ನೀಡುವಂತೆ ಕೇಂದ್ರವನ್ನು ಕೋರಲಾಗಿದ್ದು ₹ 17 ಕೋಟಿ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.

ಸಚಿವ ಸಿ.ಎನ್.ಅಶ್ವತ್ಥನಾರಾಯಣ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕ ಕೆ.ಗೋವಿಂದರಾಜ್‌, ಜೈನ್ ವಿವಿ ಕುಲಪತಿ ಚೆನ್ನರಾಜ್ ರಾಯ್‌ಚಂದ್ ಮತ್ತಿತರರು ಇದ್ದರು.

ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆ
ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.