ಗುಡಗೇರಿ ಸಮೀಪದ ಹರಲಾಪೂರದ ಮಲ್ಲಕಂಬ ಪಟುಗಳಾದ ದೀಪಾ ದೊಡಮನಿ ಹಾಗೂ ಉಮೇಶ ದೊಡಮನಿ ಅವರು ಜಯಿಸಿದ ಪದಕಗಳನ್ನು ತರಬೇತುದಾರರಾದ ಅನನ್ಯ ಹಿರೇಮಠ ತೋರಿಸಿದರು
ಗುಡಗೇರಿ: ಸಮೀಪದ ಹರಲಾಪೂರದ ಬಡ ಕುಟುಂಬದಲ್ಲಿ ಬೆಳೆದ ಅಣ್ಣ–ತಂಗಿ ಇಬ್ಬರೂ 18 ವರ್ಷದೊಳಗಿನ ರಾಷ್ಟ್ರಮಟ್ಟದ ಖೇಲೋ ಇಂಡಿಯಾ–ಮಲ್ಲಕಂಬ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಉಮೇಶ ಹನುಮಂತಪ್ಪ ದೊಡಮನಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ದೀಪಾ ಹನುಮಂತಪ್ಪ ದೊಡಮನಿ ಅವರು ಮೇ 4ರಿಂದ ಬಿಹಾರದ ಬೋಧಗಯಾದಲ್ಲಿ ನಡೆಯಲಿರುವ 7ನೇ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಆಯ್ಕೆಗೊಂಡಿದ್ದಾರೆ.
ಬಾಗಲಕೋಟೆಯ ತುಳಸಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯಮಟ್ಟದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಇಬ್ಬರೂ, ರಾಜ್ಯ ತಂಡಕ್ಕೆ ಆಯ್ಕೆಗೊಂಡಿದ್ದರು. ಮೂರು ವರ್ಷಗಳಿಂದ ಅನನ್ಯ ಹಿರೇಮಠ ಅವರ ಬಳಿ ಮಲ್ಲಕಂಬದ ತರಬೇತಿ ಪಡೆದಿದ್ದಾರೆ.
‘ಗ್ರಾಮದ ಹಿರಿಯ ಮಲ್ಲಕಂಬಪಟು ಎಸ್.ಎಸ್. ಹಿರೇಮಠ ಅವರನ್ನು ನೋಡಿ, ನಾವೂ ಮಲ್ಲಕಂಬ ಕಲಿಯಬೇಕೆಂಬ ಆಸೆ ಮೂಡಿತು. ಅನನ್ಯ ಹಿರೇಮಠ ಅವರು ಮಲ್ಲಕಂಬದ ತರಬೇತಿಯನ್ನು ಉಚಿತವಾಗಿ ನೀಡಿದರು. ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದು ಸಂತೋಷವಾಗಿದೆ’ ಎಂದು ಉಮೇಶ ದೊಡಮನಿ ಹಾಗೂ ದೀಪಾ ದೊಡಮನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.