ADVERTISEMENT

ಸಂಕಷ್ಟದಲ್ಲಿ ನಸ್ರೀನ್:‌ ನೆರವು ನೀಡಿದ ಕೆಕೆಎಫ್‌ಐ

ಪಿಟಿಐ
Published 25 ಏಪ್ರಿಲ್ 2020, 19:45 IST
Last Updated 25 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ತಂಡದ ನಾಯಕಿ ನಸ್ರೀನ್‌ ಅವರ ಕುಟುಂಬಕ್ಕೆ ಭಾರತ ಕೊಕ್ಕೊ ಫೆಡರೇಷನ್‌ (ಕೆಕೆಎಫ್‌ಐ) ಶನಿವಾರ ₹1 ಲಕ್ಷ ನೆರವು ನೀಡಿದೆ.

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಿಂದ (ಎಎಐ) ವಿದ್ಯಾರ್ಥಿ ವೇತನ ಪಡೆಯುತ್ತಿರುವ 22 ವರ್ಷ ವಯಸ್ಸಿನ ನಸ್ರೀನ್‌ ಅವರು 2019ರ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವು ಚಿನ್ನದ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.

ನಸ್ರೀನ್‌ ಅವರ ತಂದೆ ಸ್ಟೀಲ್‌ ಪಾತ್ರೆಗಳನ್ನು ಮಾರಾಟ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರ ಕೆಲಸಕ್ಕೆ ಕುತ್ತು ಬಂದಿದ್ದು ಕುಟುಂಬದವರೆಲ್ಲರೂ ಹೊತ್ತಿನ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯ ತಿಳಿದ ಕೂಡಲೇ ಕೆಕೆಎಫ್‌ಐ, ನಸ್ರೀನ್‌ ಅವರ ಬ್ಯಾಂಕ್‌ ಖಾತೆಗೆ ₹ 1 ಲಕ್ಷ ಜಮೆ ಮಾಡಿದೆ.

ADVERTISEMENT

‘ಪ್ರತಿಭಾನ್ವಿತ ಕ್ರೀಡಾಪಟುಗಳು ಹಾಗೂ ಅವರ ಕುಟುಂಬದವರು ಕಷ್ಟದಲ್ಲಿರುವ ವಿಷಯ ಗೊತ್ತಾದ ಕೂಡಲೇ ನಾವು ಅವರ ನೆರವಿಗೆ ಧಾವಿಸುತ್ತೇವೆ. ಅದು ನಮ್ಮ ಕರ್ತವ್ಯ. ನಸ್ರೀನ್‌ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವ ವಿಷಯ ತಿಳಿದು ತುಂಬಾ ನೋವಾಯಿತು’ ಎಂದು ಕೆಕೆಎಫ್‌ಐ ಮಹಾ ಕಾರ್ಯದರ್ಶಿ ಎಂ.ಎಸ್‌.ತ್ಯಾಗಿ ಹೇಳಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆಟಗಾರರು, ನಿರ್ಗತಿಕರು ಹಾಗೂ ಬಡವರಿಗೆ ಸ್ಥಳೀಯ ಸ್ವಯಂ ಸೇವಕರ ಸಹಾಯದಿಂದ ಉಚಿತವಾಗಿ ಆಹಾರ ಒದಗಿಸುತ್ತಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.