ADVERTISEMENT

ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್, ಶ್ರೀಕಾಂತ್ ನಿರ್ಗಮನ

ಪಿಟಿಐ
Published 22 ನವೆಂಬರ್ 2023, 14:44 IST
Last Updated 22 ನವೆಂಬರ್ 2023, 14:44 IST

ಶೆನ್‌ಝೆನ್‌: ಭಾರತದ ಪ್ರಮುಖ ಆಟಗಾರರಾದ ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರಿಕಾಂತ್ ಅವರು ಋತುವಿನ ಕೊನೆಯ ಬಿಡಬ್ಲ್ಯುಎಫ್‌ ಸೂಪರ್‌ 750 ಸರಣಿಯಾದ ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ, ವಿಶ್ವ ಕ್ರಮಾಂಕದಲ್ಲಿ 17ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್ 19–21, 18–21 ರಿಂದ ಏಳನೆ ಶ್ರೇಯಾಂಕದ ಷಿ ಯುಕಿ (ಚೀನಾ) ಮಣಿದರು. ವಿಶ್ವ ಕ್ರಮಾಂಕದಲ್ಲಿ 24ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಮೂರು ಗೇಮ್‌ಗಳ ಸೆಣಸಾಟದಲ್ಲಿ 15–21, 21–14, 13–21 ರಲ್ಲಿ ವಿಶ್ವ ಚಾಂಪಿಯನ್‌ ಕುನ್ಲಾವುತ್ ವಿಟಿಡ್‌ಸರ್ನ್ (ಥಾಯ್ಲೆಂಡ್‌) ಅವರಿಗೆ ಸೋತರು.

ವಿಶ್ವ ಟೂರ್‌ನಲ್ಲಿ ಶ್ರೀಕಾಂತ್‌ ಅವರಿಗೆ ಇದು ಮೂರನೇ ಬಾರಿ ಮೊದಲ ಸುತ್ತಿನಲ್ಲೇ ಸೋಲು ಎದುರಾಗಿದೆ.

ADVERTISEMENT

ಏಪ್ರಿಲ್‌ 28ರೊಳಗೆ ಕ್ರಮಾಂಕಪಟ್ಟಿಯಲ್ಲಿ ಮೊದಲ 16ರಲ್ಲಿ ಸ್ಥಾನ ಪಡೆದಲ್ಲಿ ಮಾತ್ರ ಲಕ್ಷ್ಯ ಮತ್ತು ಶ್ರೀಕಾಂತ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ.

ಯುವ ಆಟಗಾರ ಪ್ರಿಯಾಂಶು ರಾಜಾವತ್ ಅವರೂ ಮೊದಲ ಸುತ್ತನ್ನು ದಾಟಲಿಲ್ಲ. ಜಪಾನ್‌ನ ಕೆಂಟಾ ನಿಶಿಮೊಟೊ ಅವರು 46 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಿಯಾಂಶು ಅವರನ್ನು 17–21, 14–21 ರಿಂದ ಸೋಲಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಎಚ್‌.ಎಸ್‌.ಪ್ರಣಯ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ ತಮ್ಮ ಎರಡನೇ ಸುತ್ತಿನ ಪಂದ್ಯಗಳನ್ನು ಗುರುವಾರ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.