ADVERTISEMENT

ಲಂಕೆಯ ಪ್ರತಿಭೆ ಬೆಂಗಳೂರಿನ ಸೊಸೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಬೀಟ್ರಿಸ್ ಮತ್ತು ಶಂಕರ್ ಹೆಗ್ಡೆ
ಬೀಟ್ರಿಸ್ ಮತ್ತು ಶಂಕರ್ ಹೆಗ್ಡೆ    

‘80ರ ದಶಕದಲ್ಲಿ ಭಾರತದ ಟ್ರ್ಯಾಕ್‌ನಲ್ಲಿ ಮೂಡಿದ ಬೆಳ್ಳಿ ಬೆಳಕು, ಕೊಡಗಿನ ಅಶ್ವಿನಿ ನಾಚಪ್ಪ. ದಕ್ಷಿಣ ಏಷ್ಯಾ ಗೇಮ್ಸ್‌ನ ಮೂರು ಆವೃತ್ತಿಗಳಲ್ಲಿ ಚಿನ್ನ–ಬೆಳ್ಳಿ ಪದಕಗಳನ್ನು ಗಳಿಸಿಕೊಟ್ಟ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಅವರು ಬೆಂಗಳೂರಿನ ಸೇಕ್ರೆಡ್ ಹಾರ್ಟ್ ಶಾಲೆಯ ಹಳೆಯ ವಿದ್ಯಾರ್ಥಿ. ಒಲಿಂಪಿಕ್ಸ್ ಅಂಗಣದವರೆಗೂ ಬೆಳೆದ ಕರ್ನಾಟಕದ ಈ ಪ್ರತಿಭೆಗೆ ಮೊದಲು ಸ್ಪೈಕ್ಸ್ ಕೊಟ್ಟವರು ಯಾರು ಗೊತ್ತೇ? ಅವರು ಶ್ರೀಲಂಕಾದ ಓಟಗಾರ್ತಿ, ಬೆಂಗಳೂರಿನ ಸೊಸೆ ಬೀಟ್ರಿಸ್ ರಂಜಿನಿ ಭಂಡಾರ ಅರ್ಥಾತ್ ಬೀಟ್ರಿಸ್ ಹೆಗ್ಡೆ.

ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಬೀಟ್ರಿಸ್ ಇಲ್ಲೇ ಉಳಿಯಲು ನಿರ್ಧರಿಸಿದರು. ಟ್ರ್ಯಾಕ್‌ನಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಹೆಸರೂ ತಂದುಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದ ಬೀಟ್ರಿಸ್, ಅದೇ ವೃತ್ತಿಯಲ್ಲಿದ್ದ ಶಂಕರ್ ಹೆಗ್ಡೆ ಅವರನ್ನು ವರಿಸುವ ಮೂಲಕ ಉದ್ಯಾನ ನಗರಿಯ ಸೊಸೆಯಾದರು. ಅನಾರೋಗ್ಯದಿಂದ ಜುಲೈ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅವರು ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಬೆಳಗಿದ ಅನೇಕರಿಗೆ ನೆಚ್ಚಿನ ಗುರು. ಅವರಿಗೆ ಪತಿ ಮತ್ತು ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

ಶ್ರೀಲಂಕಾದ ಗಾಲ್‌ನ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಕಲಿತ ಬೀಟ್ರಿಸ್ 1968ರಲ್ಲಿ ನಡೆದಿದ್ದ ಸಿ.ಪ್ರಸನ್ನ ಕುಮಾರ್ ಸ್ಮಾರಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. 1970ರಲ್ಲಿ ಮತ್ತೊಮ್ಮೆ ಇಲ್ಲಿಗೆ ಬಂದು ವೈಎಂಸಿಎ ದೈಹಿಕ ಶಿಕ್ಷಣ ಕಾಲೇಜು ಸೇರಿದರು. ಎನ್‌.ಲಿಂಗಪ್ಪ, ವಿ.ಆರ್.ಬೀಡು ಮತ್ತು ಸೋಮಶೇಖರಪ್ಪ ಅವರಂಥ ದಿಗ್ಗಜರ ಬಳಿ ತರಬೇತಿ ಪಡೆದು ಸ್ಪ್ರಿಂಟ್, ಹರ್ಡಲ್ಸ್ ಮತ್ತು ಜಾವೆಲಿನ್ ಥ್ರೋದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ರಾಜ್ಯ ಹ್ಯಾಂಡ್‌ಬಾಲ್ ತಂಡದ ಸದಸ್ಯೆಯೂ ಆಗಿದ್ದರು. ರಾಷ್ಟ್ರೀಯ ಮುಕ್ತ ಕ್ರೀಡಾಕೂಟದ ಜಾವೆಲಿನ್ ಥ್ರೋದಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದರು.

ADVERTISEMENT

ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಅಶ್ವಿನಿ ಮತ್ತು ಅವರ ಸಹೋದರಿ ಪುಷ್ಪಾ ಅವರಂಥ ಪ್ರತಿಭೆಗಳಿಗೆ ಸಾಣೆ ಹಿಡಿದು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದವರು ಬೀಟ್ರಿಸ್‌. ‘ಅವರು ಆಗಾಗ ತವರಿಗೆ ಹೋಗುತ್ತಿದ್ದರು. ಒಂದು ಬಾರಿ ಲಂಕಾದಿಂದ ವಾಪಸಾಗುವಾಗ ಎರಡು ಜೊತೆ ಸ್ಪೈಕ್ಸ್‌ ತೆಗೆದುಕೊಂಡು ಬಂದು ನನಗೂ ಅಕ್ಕನಿಗೂ ಕೊಟ್ಟರು. ಅವರು ನೀಡಿದ ಮೊದಲ ಸ್ಪೈಕ್ಸ್ ನನ್ನ ಸಾಧನೆಯ ಹಾದಿಯನ್ನು ಸುಗಮಗೊಳಿಸಿದವು’ ಎಂದು ಅಶ್ವಿನಿ ನಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭ್ಯಾಸಕ್ಕಾಗಿಬೀಟ್ರಿಸ್ ಅವರು ಕಂಠೀರವ ಕ್ರೀಡಾಂಗಣಕ್ಕೆ ಸೈಕಲ್‌ನಲ್ಲಿ ಬರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟುತ್ತಿದೆ. ವೈಎಂಸಿಎ ಕಾಲೇಜಿನಲ್ಲಿ ತರಬೇತಿ ಸಂದರ್ಭದಲ್ಲೇ ಗೆಳೆಯರಂತೆ ಇದ್ದೆವು. ಮದುವೆಯಾದ ನಂತರ ಅವರ ಕ್ರೀಡಾ ಸಾಧನೆಗೆ ನಿತ್ಯವೂ ಬೆಂಬಲ ನೀಡುತ್ತಿದ್ದೆ. ಅವರೊಂದಿಗೆ ಶ್ರೀಲಂಕೆಗೆ ಹೋಗುವುದು ನನ್ನ ಹವ್ಯಾಸಗಳಲ್ಲಿ ಒಂದಾಗಿತ್ತು. ಕಳೆದ ವರ್ಷ ಮಗಳ ಮದುವೆ ಲಂಕಾದಲ್ಲೇ ಮಾಡಿಸಿದ್ದೆವು’ ಎಂದು ಉಡುಪಿಯಲ್ಲಿ ಜನಿಸಿ ಬೆಳೆದ ಶಂಕರ್ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.