ಲಕ್ಷ್ಯ ಸೇನ್
ಮಕಾವ್: ಭಾರತದ ಅಗ್ರಮಾನ್ಯ ಆಟಗಾರ ಲಕ್ಷ್ಯ ಸೇನ್ ಹಾಗೂ ತರುಣ್ ಮನ್ನೆಪಲ್ಲಿ ಅವರು ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ಸೆಮಿಫೈನಲ್ ತಲುಪಿದರು.
23 ವರ್ಷ ವಯಸ್ಸಿನ ತರುಣ್ 21–12, 13–21, 21–18ರಿಂದ ಚೀನಾದ ಹು ಝೆ ಅವರನ್ನು ಮಣಿಸಿದರು. ತೀವ್ರ ಹೋರಾಟ ಕಂಡ ಪಂದ್ಯದಲ್ಲಿ ಭಾರತದ ಉದಯೋನ್ಮುಖ ಆಟಗಾರ ತಮ್ಮ ವೇಗ ಹಾಗೂ ಚತುರತೆಯಿಂದ ಕೂಡಿದ ಶಾಟ್‌ಗಳಿಂದ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದರು.
ಈ ಮೂಲಕ, ತರುಣ್ ಅವರು ಚೊಚ್ಚಲ ಬಾರಿಗೆ ಸೂಪರ್ 300 ಹಂತದ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದರು. ಅವರು ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಜರ್ಮನಿ ಓಪನ್ ಟೂರ್ನಿಯಲ್ಲಿ ಕ್ವಾರ್ಟಲ್‌ಫೈನಲ್ ತಲುಪಿದ್ದು ಈವರೆಗಿನ ಸಾಧನೆಯಾಗಿತ್ತು.
ಟೂರ್ನಿಯ ಎರಡನೇ ಶ್ರೇಯಾಂಕದ ಲಕ್ಷ್ಯ ಅವರು 21–14, 18–21, 21–14ರಿಂದ ಚೀನಾದ ಷುವಾನ್ ಶೆನ್ ಝು ಎದುರು ಜಯ ಸಾಧಿಸಿದರು. ಒಂದು ಗಂಟೆ ಮೂರು ನಿಮಿಷ ನಡೆದ ಈ ಪಂದ್ಯದಲ್ಲಿ ಲಕ್ಷ್ಯ ಅವರು ಕಠಿಣ ಪೈಪೋಟಿ ಎದುರಿಸಬೇಕಾಯಿತು.
ಅಂತಿಮ ನಾಲ್ಕರ ಸುತ್ತಿನಲ್ಲಿ ಲಕ್ಷ್ಯ ಅವರು ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಎದುರು ಹಾಗೂ ತರುಣ್ ಅವರು ಮಲೇಷ್ಯಾದ ಜಸ್ಟಿನ್ ಹೋ ವಿರುದ್ಧ ಸೆಣಸಬೇಕಿದೆ.
ಸಾತ್ವಿಕ್–ಚಿರಾಗ್ ಜೋಡಿ ನಿರ್ಗಮನ: ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದ್ದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಗೆ ಮಲೇಷ್ಯಾದ ಚೂಂಗ್ ಹಾನ್ ಜಿಯಾನ್–ಹೈಕಲ್ ಮುಹಮ್ಮದ್ ಆಘಾತ ನೀಡಿದರು.
ವಿಶ್ವದ ಮಾಜಿ ಅಗ್ರಮಾನ್ಯ ಜೋಡಿಯಾಗಿರುವ ಸಾತ್ವಿಕ್–ಚಿರಾಗ್, 14–21, 21–13, 20-22ರಿಂದ ಮಲೇಷ್ಯಾ ಜೋಡಿಗೆ ಶರಣಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.