ADVERTISEMENT

ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ತಂಪು ಮುಂಜಾವದಲ್ಲಿ ಚಿಮ್ಮಿದ ಉತ್ಸಾಹ

ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ಓಟಗಾರರ ಸಂಭ್ರಮ

ವಿಕ್ರಂ ಕಾಂತಿಕೆರೆ
Published 22 ನವೆಂಬರ್ 2025, 23:29 IST
Last Updated 22 ನವೆಂಬರ್ 2025, 23:29 IST
30 ಕಿಲೊಮೀಟರ್ ಓಟದ ಆರಂಭ
30 ಕಿಲೊಮೀಟರ್ ಓಟದ ಆರಂಭ   

ಚಿಕ್ಕಮಗಳೂರು: ಶರದ್ಕಾಲದ ಥಂಡಿ ಇಲ್ಲಿ ಇನ್ನೂ ಮೈಕೊರೆಯುವ ಮಟ್ಟಕ್ಕೆ ತಲುಪಿಲ್ಲ. ತಂಗಾಳಿ ತೀಡುತ್ತಿದ್ದ ಹಿತವಾದ ವಾತಾವರಣದಲ್ಲಿ ಚಿಮ್ಮುವ ಉತ್ಸಾಹದೊಂದಿಗೆ 'ಟ್ರ್ಯಾಕ್'ಗೆ ಇಳಿದ ಓಟಗಾರರು ಸವಾಲಿನ ದಾರಿಯಲ್ಲಿ ಎದೆಗುಂದದೆ ಸಾಗಿದರು.

ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ ಮತ್ತು ಅಮೆರಿಕದ ಟೆಕಿಯಾನ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಜಿರಿಮ್ ಸಂಸ್ಥೆ ಆಯೋಜಿಸಿರುವ ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್ ಚಂದ್ರದ್ರೋಣ ಪರ್ವತ ಸಾಲುಗಳ ಆಸುಪಾಸಿನಲ್ಲಿ ಶನಿವಾರವಿಡೀ ರೋಮಾಂಚಕ ವಾತಾವರಣ ಸೃಷ್ಟಿಸಿತು.

ಸಹ್ಯಾದ್ರಿ ಸಾನುವಿನ‌ ಮುತ್ತೋಡಿ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಪ್ರಕೃತಿ ಸೊಗಯಿಸುವ ಮಲ್ಲಂದೂರು ಗ್ರಾಮದ ನವಗ್ರಾಮ ಕ್ರಿಕೆಟ್ ಮೈದಾನದಲ್ಲಿ ಬೆಳಕು ಹರಿಯುವ ಮೊದಲೇ ಕ್ರೀಡಾಸಕ್ತರ ಕಲರವ. 100 ಕಿಲೊಮೀಟರ್, 50 ಕಿ.ಮೀ ಮತ್ತು 30 ಕಿ.ಮೀ ಓಟ ಆರಂಭಗೊಂಡದ್ದು ಇಲ್ಲಿಂದಲೇ, ಮುಗಿದದ್ದೂ ಇಲ್ಲೇ.
ಮೊದಲು, 6.30ಕ್ಕೆ ಹಸಿರು ನಿಶಾನೆ ಸಿಕ್ಕಿದ್ದು 100 ಕಿ.ಮೀ ಓಟಕ್ಕೆ. ಹಗಲು ಮತ್ತು ರಾತ್ರಿ ಓಡಬೇಕಾಗಿರುವ ಈ ವಿಭಾಗದಲ್ಲಿ‌ 113 ಮಂದಿ ಛಲದಿಂದ ಕಣಕ್ಕೆ ಇಳಿದಿದ್ದರು.‌ 344 ಮಂದಿ ಭಾಗವಹಿಸಿದ್ದ 50 ಕಿ.ಮೀ ಓಟ 7 ಗಂಟೆಗೆ ಆರಂಭವಾಯಿತು. ಇದರ ಬೆನ್ನಲ್ಲೇ ಅತಿ ಹೆಚ್ಚು, 550 ಮಂದಿ ಪಾಲ್ಗೊಂಡ 30 ಕಿ.ಮೀ ಓಟಕ್ಕೆ ಚಾಲನೆ ದೊರಕಿತು. ಬೆಳಗಿನ ಎಲ್ಲ ಓಟಗಳಿಗೂ ಟೆಕಿಯಾನ್ ಚೀಫ್ ಪೀಪಲ್ ಆಫೀಸರ್ ರಾಣಾ ರೊಬಿಲಾರ್ಡ್ ಚಾಲನೆ ನೀಡಿದರು.

ADVERTISEMENT

50 ಕಿ.ಮೀ ರಾತ್ರಿ ಓಟ ಸಂಜೆ 4.30ಕ್ಕೆ ಆರಂಭಗೊಂಡಿತು. ಇದರಲ್ಲಿ ಪಾಲ್ಗೊಂಡವರು 45 ಮಂದಿ. 30 ಕಿ.ಮೀಗೆ ಮಧ್ಯಾಹ್ನ 2 ಗಂಟೆ, 50 ಕಿ.ಮೀಗೆ ಮಧ್ಯಾಹ್ನ 3 ಗಂಟೆ, 100 ಕಿ.ಮೀ ಹಾಗೂ ರಾತ್ರಿ ಓಟಕ್ಕೆ ಭಾನುವಾರ ಮುಂಜಾನೆ 3 ಗಂಟೆ ಕಟ್ ಆಫ್ ಸಮಯ ನಿಗದಿ. ಈ ಅವಧಿಯಲ್ಲಿ ಓಟ ಮುಗಿಸಿದವರಿಗೆ ಪದಕದ ಗೌರವ.

ಭಾವುಕ ಕ್ಷಣಗಳು

ಸಾಹಸಮಯ ರಾತ್ರಿ ಓಟಕ್ಕೆ ಕ್ರೀಡಾಪಟುಗಳು ಸಜ್ಜಾಗುತ್ತಿದ್ದಂತೆ ವಾತಾವರಣವಿಡೀ ಭಾವುಕವಾಯಿತು. ಕೆಲವು ಓಟಗಾರರ ಮನೆಮಂದಿ ಆತಂಕದಿಂದ ಅಪ್ಪಿಕೊಂಡು ಧೈರ್ಯ ತುಂಬಿ ಕಳುಹಿಸಿದರು. ಹಣೆಮೇಲೆ ಹೆಡ್ ಲೈಟ್ ಕಟ್ಟಿಕೊಂಡು ರನ್ನಿಂಗ್ ಸ್ಟಿಕ್ ಹಿಡಿದು ಬೆನ್ನಲ್ಲಿ‌ ಕಿಟ್ ಹೊತ್ತುಕೊಂಡು ನಿಂತವರು ಓಡಲು ಆರಂಭಿಸುತ್ತಿದ್ದಂತೆ ಇಬ್ದದಿಯಲ್ಲಿ ನಿಂತಿದ್ದವರು ಶುಭ ಕೋರಿದರು.

ಈ ಸಂದರ್ಭದಲ್ಲಿ ಬೆಳಿಗ್ಗೆ ಓಟ ಆರಂಭಿಸಿದವರ ಪೈಕಿ ತಡವಾಗಿ ಬಂದವರು ಗುರಿಯತ್ತ ಧಾವಿಸಿದರು. ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಬೆಂಗಳೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ಸುರೇಶ್ ಬೃಹತ್ ಗಾತ್ರದ ಕನ್ನಡ ಧ್ವಜ ಹಿಡಿದುಕೊಂಡು ಬಂದು ಬೆರಗು ಮೂಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

'ಪರಿಸರದ ಸೌಂದರ್ಯ ಸವಿಯುತ್ತ ಓಡುವುದು ಮೋಹಕ ಮತ್ತು ರೋಚಕ ವಿಷಯ. ಇಲ್ಲಿನ ವಾತಾವರಣವನ್ನು ಕಾಫಿತೋಟಗಳ ಒಳಗೆ ಮತ್ತು ಕಾಡಂಚಿನ ಊರುಗಳ ಮೂಲಕ ಓಡಿ ಹತ್ತಿರದಿಂದ ಅನುಭವಿಸಲು ಸಾಧ್ಯವಾಯಿತು' ಎಂದು ಓಟಗಾರರು 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.