ADVERTISEMENT

Malnad Ultra: ಕಾಫಿತೋಟದ ನಡುವೆ ಸವಾಲಿನ ಓಟ

ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಅಲ್ಟ್ರಾ ರನ್‌; ನಿಗದಿತ ಸಮಯದಲ್ಲಿ ಗುರಿ ಮುಟ್ಟುವ ಛಲ

ವಿಕ್ರಂ ಕಾಂತಿಕೆರೆ
Published 21 ನವೆಂಬರ್ 2025, 23:59 IST
Last Updated 21 ನವೆಂಬರ್ 2025, 23:59 IST
ಮಲೆನಾಡು ಅಲ್ಟ್ರಾ ರನ್‌ನಲ್ಲಿ ಭಾಗವಹಿಸುವ ಓಟಗಾರರು ಮಲ್ಲಂದೂರು ಸಮೀಪ ಶುಕ್ರವಾರ ತಾಲೀಮು ನಡೆಸಿದರು –ಪ್ರಜಾವಾಣಿ ಚಿತ್ರ: ಎ.ಎನ್.ಮೂರ್ತಿ
ಮಲೆನಾಡು ಅಲ್ಟ್ರಾ ರನ್‌ನಲ್ಲಿ ಭಾಗವಹಿಸುವ ಓಟಗಾರರು ಮಲ್ಲಂದೂರು ಸಮೀಪ ಶುಕ್ರವಾರ ತಾಲೀಮು ನಡೆಸಿದರು –ಪ್ರಜಾವಾಣಿ ಚಿತ್ರ: ಎ.ಎನ್.ಮೂರ್ತಿ   

ಚಿಕ್ಕಮಗಳೂರು: ಕಾಫಿತೋಟಗಳ ನಡುವಿನ ಕಾಲುದಾರಿಗಳು, ಜೀಪ್‌ ದಾರಿಗಳು, ಏರು–ತಗ್ಗುಗಳು ಮತ್ತು ತೊರೆಗಳ ಸವಾಲು ಮೀರಿ ಗುರಿ ತಲುಪುವ ಛಲ ಹೊತ್ತಿರುವ ದೇಶವಿದೇಶಗಳ ಓಟಗಾರರು ರಮಣೀಯ ತಾಣವಾದ ಮಲ್ಲಂದೂರಿಗೆ ಶುಕ್ರವಾರ ಲಗ್ಗೆ ಇರಿಸಿದ್ದಾರೆ.

ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ ಮತ್ತು ಅಮೆರಿಕದ ಟೆಕಿ ಆನ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಜಿರಿಮ್ ಸಂಸ್ಥೆ ಆಯೋಜಿಸಿರುವ ಮಲೆನಾಡು ಅಲ್ಟ್ರಾ ಟ್ರೇಲ್‌ ರನ್ 9ನೇ ಆವೃತ್ತಿ ಶನಿವಾರ ನಡೆಯಲಿದೆ. 100 ಕಿಲೊಮೀಟರ್‌, 50 ಕಿಮೀ, 30 ಕಿಮೀ ಜೊತೆಯಲ್ಲಿ 50 ಕಿಮೀ ರಾತ್ರಿ ಓಟದ ರೋಮಾಂಚನವೂ ಈ ಬಾರಿ ಇದೆ. 100 ಕಿಮೀ, 50 ಕಿಮೀ ಮತ್ತು 30ಕಿಮೀ ಓಟ ಬೆಳಿಗ್ಗೆ ಆರಂಭವಾಗಲಿದ್ದು. ರಾತ್ರಿ ಓಟ ಸಂಜೆ 4.30ಕ್ಕೆ ಶುರುವಾಗಲಿದೆ.

ಓಟಗಾರರ ದೈಹಿಕ ಸಾಮರ್ಥ್ಯ ಮತ್ತು ಮನೋಬಲ ಪಣಕ್ಕೊಡ್ಡುವ ಈ ಓಟಕ್ಕೆ ಬಹುಮಾನವಿಲ್ಲ. ಎಲ್ಲ ವಿಭಾಗದಲ್ಲೂ ನಿಗದಿಪಡಿಸಿದ ಸಮಯದೊಳಗೆ ಗುರಿ ಮುಟ್ಟುವವರು ಪ್ರಮಾಣಪತ್ರಕ್ಕೆ ಅರ್ಹರಾಗುತ್ತಾರೆ. 30 ಕಿಮೀ ಓಟಕ್ಕೆ ಮಧ್ಯಾಹ್ನ 2 ಗಂಟೆ ನಿಗದಿ ಮಾಡಿದ್ದು 50 ಕಿಮೀ ಓಡುವವರು ಸಂಜೆ 5 ಗಂಟೆಯ ಒಳಗೆ ಪೂರ್ಣಗೊಳಿಸಬೇಕು. ಉಳಿದೆರಡು ಓಟದಲ್ಲಿ ಪಾಲ್ಗೊಳ್ಳುವವರು ಭಾನುವಾರ ಮುಂಜಾನೆ 3 ಗಂಟೆಯೊಳಗೆ ಗುರಿಮುಟ್ಟಬೇಕು.

ADVERTISEMENT

ಸಮುದ್ರ ಮಟ್ಟದಿಂದ 5100 ಮೀಟರ್‌ ಎತ್ತರವಿರುವ ತೊಟ್ಲಪ್ಪನಗುಡ್ಡ ಪ್ರದೇಶ ಈ ಬಾರಿಯ ದೊಡ್ಡ ಸವಾಲು. ಎರಡು ತೊರೆಗಳನ್ನು ದಾಟಬೇಕು, ಪಟ್ಟೆ–ಬ್ಲಾಕ್‌ಗಳನ್ನು ಒಳಗೊಂಡ ತೋಟದೊಳಗಿನ ಕಚ್ಛಾರಸ್ತೆಗಳಲ್ಲಿ ಸಾಗಬೇಕು, ತಿರುವುಗಳನ್ನು ಸುತ್ತಬೇಕು. ಬಿಸಿಲಿನ ಶಾಖಕ್ಕೆ ಮೈಯೊಡ್ಡಬೇಕು, ಹಣೆಯ ಮೇಲೆ ಹೆಡ್‌ಲೈಟ್‌ ಕಟ್ಟಿಕೊಂಡು ರಾತ್ರಿ ಓಡುವವರಿಗೆ ಕಾಟಿ, ಕಾಡುಹಂದಿ, ಸರೀಸೃಪಗಳು ಎದುರಾಗುವ ಸಾಧ್ಯತೆ ಇದ್ದು ತಪ್ಪಿಸಿಕೊಂಡು ಮುನ್ನುಗ್ಗಬೇಕು. ಅವರಿಗೆ ಧೈರ್ಯ ತುಂಬಲು ಇರುವುದು ಸಿಕಾಡ, ಜೀರುಂಡೆಗಳ ‘ವಾದ್ಯಗೋಷ್ಠಿ’ ಮತ್ತು ಹಕ್ಕಿಗಳ ಕೂಗು ಮಾತ್ರ.

‘ಇದು ದುರ್ಗಮ ಓಟ. ಬಿಬ್ ನಂಬರ್ ಇರುವ ಫಲಕದಲ್ಲಿ ಚಿಪ್ ಅಳವಡಿಸಲಾಗಿದೆ. ಓಟ ಸಾಗುವ ದಾರಿಯಲ್ಲಿ ಐದು ಕಡೆ ಟೈಮಿಂಗ್‌ ಮ್ಯಾಟ್ ಅಳವಡಿಸಲಾಗಿದೆ. ಆ ಮೂಲಕ ಹಾದು ಹೋಗುವಾಗ ಚಿಪ್ ಸ್ಕ್ಯಾನ್ ಆಗುತ್ತದೆ. ಅಲ್ಲಲ್ಲಿ ಸ್ಥಾಪಿಸಿರುವ ಏಡ್‌ ಸ್ಟೇಷನ್‌ಗಳಲ್ಲಿ ಓಟಗಾರರನ್ನು ಟ್ರ್ಯಾಕ್ ಮಾಡಲಾಗುತ್ತದೆ. ಸಹಾಯಕ್ಕೆ 20 ಜೀಪ್‌ಗಳು ಸಾಗುತ್ತವೆ’ ಎಂದು ಓಟದ ನಿರ್ದೇಶಕ ಶ್ಯಾಮ್ ಸುಂದರ್ ಪಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.