
ಚಿಕ್ಕಮಗಳೂರು: ಪ್ರತಿ ಗಂಟೆಗೆ ಸರಿಸುಮಾರು 10 ಕಿಲೊಮೀಟರ್ ವೇಗದಲ್ಲಿ ಓಡಿದ ದೇಶದ ಪ್ರಮುಖ ಟ್ರೇಲ್ ಅಲ್ಟ್ರಾ ಓಟಗಾರ ವಿಶಾಲ್ ವಳವಿ 9 ತಾಸು 59 ನಿಮಿಷ 28 ಸೆಕೆಂಡುಗಳಲ್ಲಿ ಗುರಿ ಮುಟ್ಟಿದಾಗ ಫಿನಿಶಿಂಗ್ ಪಾಯಿಂಟ್‌ನಲ್ಲಿ ಕುತೂಹಲದಿಂದ ಕಾಯುತ್ತಿದ್ದವರು ಸಂಭ್ರಮದ ಸ್ವಾಗತ ಕೋರಿದರು.
ಬೆಂಗಳೂರಿನ ಜಿರಿಮ್ ಸಂಸ್ಥೆ, ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಮತ್ತು ಅಮೆರಿಕದ ಟೆಕಿಯಾನ್ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಮಲ್ಲಂದೂರಿನಲ್ಲಿ ಆಯೋಜಿಸಿದ್ದ ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್‌ನ 100 ಕಿಮೀ ಓಟವನ್ನು ನಿಗದಿತ ಅವಧಿಗಿಂತ ಮೊದಲೇ ಮುಕ್ತಾಯಗೊಳಿಸಿದ ವಳವಿ ಜೀವಮಾನದ ಶ್ರೇಷ್ಠ ಸಾಧನೆಯೊಂದಿಗೆ ನಗೆ ಸೂಸಿದರು.
ಮಲ್ಲಂದೂರಿನ ನವಗ್ರಾಮ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 6.30ಕ್ಕೆ 100 ಕಿಮೀ ಓಟಕ್ಕೆ ಚಾಲನೆ ನೀಡಲಾಗಿತ್ತು. ಭಾನುವಾರ ಮುಂಜಾನೆ 3.30ರೊಳಗೆ ಗುರಿ ಮುಟ್ಟಿದವರಿಗೆ ಪದಕದ ಗೌರವ ಇತ್ತು. ಆದರೆ ವಿಶಾಲ್ ಸಂಜೆ 4 ಗಂಟೆ 29 ನಿಮಿಷ 28 ಸೆಕೆಂಡುಗಳಲ್ಲಿ ಗುರಿ ಸೇರಿದರು. ಸುಭಾಷ್ ಫೌಜ್‌ದಾರ್ 13 ತಾಸುಗಳಲ್ಲಿ ಗುರಿ ಮುಟ್ಟಿದರು. 7 ಗಂಟೆ 18 ನಿಮಿಷ 58 ಸೆಕೆಂಡು ಆದಾಗ ಅವರು ಓಟ ಮುಗಿಸಿದರು. ಕಳೆದ ಬಾರಿಯ ಎಸ್‌ಆರ್‌ಟಿ ಅಲ್ಟ್ರಾದಲ್ಲಿ ವಿಶಾಲ್ 12ತಾಸು 16 ನಿಮಿಷ 21 ಸೆಕೆಂಡುಗಳಲ್ಲಿ 100 ಕಿಮೀ ಓಟ ಪೂರ್ತಿಗೊಳಿಸಿದ್ದರು. ಕಳೆದ ವರ್ಷದ ಸೊಲಾಂಗ್ ಸ್ಕೈ ಅಲ್ಟ್ರಾದಲ್ಲಿ 100 ಕಿಮೀ ಓಟಕ್ಕೆ ಅವರು 20 ತಾಸು ತೆಗೆದುಕೊಂಡಿದ್ದರು.
ಸುಭಾಷ್ ಫೌಜ್‌ದಾರ್‌ಗೆ ಭಾರಿ ಸವಾಲೊಡ್ಡಿದ ಮಣಿಕಂಠನ್ 7 ಗಂಟೆ 47 ನಿಮಿಷಕ್ಕೆ ಗುರಿ ತಲುಪಿದರು. ಗಿಲಿಸ್ ಪೆಟಿಟ್, ರಾಮರಾಜು ಡಿ, ನಿತಿನ್ ಸಾರಂಗ್, ಪಾರ್ಥ್ ಜೋಶಿ, ಸುದೀಪ್ತೊ ರಾಯ್‌ಚೌಧರಿ, ನವೀನ್ ಕುಮಾರ್ ಮತ್ತು ತಂಗದೊರೈ ದುರೈಸಾಮಿ ಅಗ್ರ 10 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದರು.
ಬೆಳಿಗ್ಗೆ 7 ಗಂಟೆಗೆ ಆರಂಭವಾದ 50 ಕಿಮೀ ಓಟದಲ್ಲಿ ಗುರಿ ಮುಟ್ಟಲು ಸಂಜೆ 5 ಗಂಟೆ ನಿಗದಿಗೊಳಿಸಲಾಗಿತ್ತು. ಬೆಂಗಳೂರಿನ ಸಂಜಯ್ ನೇಗಿ 4 ಗಂಟೆ 53 ನಿಮಿಷ, 9 ಸೆಕೆಂಡು ಬಾರಿಸಿದಾಗ ಫಿನಿಶಿಂಗ್ ಪಾಯಿಂಟ್ ದಾಟಿದರು. ಪ್ರಜ್ವಲ್ ಎಸ್.ವೈ 4 ಗಂಟೆ 55 ನಿಮಿಷಗಳಾದಾಗ ಗುರಿ ಮುಟ್ಟಿದರು. ಫ್ರಾಂಕ್ ಮೆಲಾಂಡ್, ಜಿನೇಶ್ ಪಿಳ್ಳೈ, ಜ್ಯಾಕ್ ಫೋರ್ಡ್, ನಿರಾದ್ ಬೋಸ್, ಮಾರುತಿ ಗಾಯಕವಾಡ್, ಹೇಳಿ ಆ್ಯಂಡರ್ಸನ್, ಸಿದ್ಧಾರ್ಥ್ ಕನ್ಸಾಲ್ ಮತ್ತು ಶುಭ್ರ ಕಾಂತಿ ದಾಸ್ ಪ್ರಮುಖ 10ರಲ್ಲಿ ಸ್ಥಾನ ಗಳಿಸಿದರು.
30 ಕಿಮೀ ಓಟದಲ್ಲಿ ರಾಘವ್ ಉಪಾಸನಿ, ಕೇಶವ್ ಶರ್ಮಾ, ಪ್ರಶಾಂತ್ ಸರ್ವಪಳ್ಳಿ, ದೀಪಕ್ ರಾಮ್‌ಜಿ, ಬಾಬು ಶೀನಪ್ಪ, ಸಾಗರ ವಾಲಿಶೆಟ್ಟಿ, ಕುಲಜೀತ್ ಸಿಂಗ್, ನಿತಿನ್ ಪಾಟೀಲ್, ಮದನ್ ರೆಡ್ಡಿ ಮತ್ತು ರಂಜಿತ್ ರಾಯ್ ಮೊದಲು ಗುರಿ ಮುಟ್ಟಿದ 10 ಓಟಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.