ADVERTISEMENT

ಚೆಸ್ ಟೂರ್ನಿ: ಗೋವಾದ ಮಂದಾರ್‌‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 19:28 IST
Last Updated 26 ಜನವರಿ 2026, 19:28 IST
   

ಹುಬ್ಬಳ್ಳಿ: ಗೋವಾದ ಮಂದಾರ್‌ ಪ್ರದೀಪ್ ಲಾಡ್ (ರೇಟಿಂಗ್: 2194) ಅವರು ಸೋಮವಾರ ಕೊನೆಗೊಂಡ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್ ಚೆಸ್ ಟೂರ್ನಿಯ ರ‍್ಯಾಪಿಡ್ ಹಾಗೂ ಬ್ಲಿಟ್ಝ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದರು.

ಗಣರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಟೂರ್ನಿಯಲ್ಲಿ ಮಂದಾರ್‌ ಅವರು ಒಟ್ಟು ಒಂಬತ್ತು ಸುತ್ತುಗಳಲ್ಲಿ ರ‍್ಯಾಪಿಡ್ ವಿಭಾಗದಲ್ಲಿ ತಮಿಳುನಾಡಿನ ಅಯ್ಯಪ್ಪನ್ ಪಿ ಸಂತಾನಪ್ರಭು ವಿರುದ್ಧ ಆರನೇ ಸುತ್ತಿನಲ್ಲಿ ಡ್ರಾ ಸಾಧಿಸಿದರು. ಉಳಿದ 8 ಸುತ್ತುಗಳಲ್ಲಿ ಗೆಲುವು ಸಾಧಿಸಿ 8.5 ಅಂಕ ಪಡೆದು, ವಿಜೇತರಾದರು.

ಬ್ಲಿಟ್ಝ್ ವಿಭಾಗದಲ್ಲಿ ಸತತ ಎಂಟು ಸುತ್ತುಗಳಲ್ಲಿ ಜಯ ಗಳಿಸಿ, ಕೊನೆಯ ಸುತ್ತಿನಲ್ಲಿ ಬೆಳಗಾವಿಯ ಶ್ರೀಕರ ದರ್ಭಾ ವಿರುದ್ಧ ಡ್ರಾ ಸಾಧಿಸಿಒಟ್ಟು 8.5 ಅಂಕ ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ADVERTISEMENT

ರ‍್ಯಾಪಿಡ್ ವಿಭಾಗದಲ್ಲಿ ಮಹಾರಾಷ್ಟ್ರದ ಋಷಿಕೇಶ್ ಕಬ್ನೂರಕರ (ರೇಟಿಂಗ್: 2027), ಅಯ್ಯಪ್ಪನ್ ಪಿ ಸಂತಾನಪ್ರಭು (ರೇಟಿಂಗ್: 1898) ಹಾಗೂ ಬ್ಲಿಟ್ಝ್ ವಿಭಾಗದಲ್ಲಿ ಧಾರವಾಡದ ಆದಿತ್ಯ ಕಲ್ಯಾಣಿ (ರೇಟಿಂಗ್: 1933), ಶ್ರೀಕರ ದರ್ಭಾ (ರೇಟಿಂಗ್: 1785) ಅವರು ತಲಾ ಎಂಟು ಅಂಕ ಗಳಿಸಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಮೊದಲ ಮೂರು ಸ್ಥಾನ ಪಡೆದವರಿಗೆ ರ‍್ಯಾಪಿಡ್ ವಿಭಾಗದಲ್ಲಿ ಕ್ರಮವಾಗಿ ₹40 ಸಾವಿರ, ₹30 ಸಾವಿರ, ₹20 ಸಾವಿರ ಹಾಗೂ ಬ್ಲಿಟ್ಝ್ ವಿಭಾಗದಲ್ಲಿ₹10 ಸಾವಿರ, ₹8 ಸಾವಿರ, ₹6 ಸಾವಿರ ನಗದು ಹಾಗೂ ಬಹುಮಾನ ವಿತರಿಸಲಾಯಿತು. ರ‍್ಯಾಪಿಡ್ ವಿಭಾಗದಲ್ಲಿ ಒಟ್ಟು 45 ಸ್ಥಾನ ಹಾಗೂ ಬ್ಲಿಟ್ಝ್ ವಿಭಾಗದಲ್ಲಿ ಒಟ್ಟು 30 ಸ್ಥಾನಗಳಿಗೆ ಪ್ರಶಸ್ತಿ ನೀಡಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯ ಹಾಗೂ ಮಲೇಷ್ಯಾ, ಅಮೆರಿಕ ದೇಶ ಸೇರಿದಂತೆ ಒಟ್ಟು 300 ಆಟಗಾರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.