
ಮೂಡುಬಿದಿರೆ (ದಕ್ಷಿಣ ಕನ್ನಡ): ಎರಡು ದಿನಗಳ ಹಿಂದೆ 4x400 ಮೀಟರ್ಸ್ ಮಿಶ್ರ ರಿಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಚಿನ್ನ ಗೆದ್ದುಕೊಟ್ಟ ತಂಡದಲ್ಲಿದ್ದ ಸಾಕೇತ್, ಸ್ವರಾಜ್ಯ ಮೈದಾನದ ಟ್ರ್ಯಾಕ್‌ನಲ್ಲಿ ಮತ್ತೊಮ್ಮೆ ಮಿಂಚು ಹರಿಸಿದರು. ಅವರಿದ್ದ ಮಂಗಳೂರು ವಿವಿ ಪುರುಷರ 4x400 ಮೀ. ರಿಲೆ ತಂಡ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿತು.
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಕೂಟದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ನಡೆದ ರಿಲೆಯ ಮೊದಲ ಲ್ಯಾಪ್‌ನಲ್ಲಿ ಓಡಿದ ಸಾಕೇತ್ ಭರ್ಜರಿ ಮುನ್ನಡೆ ತಂದುಕೊಟ್ಟರು. ಕೇಶವನ್, ಪ್ರಥಮೇಶ್ ಮತ್ತು ಆಕಾಶರಾಜ್ ಕೂಡ ಮಿಂಚಿ 3ನಿ 8.45 ಸೆಕೆಂಡುಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಆ ಮೂಲಕ 2024ರಲ್ಲಿ ಕೇರಳ ವಿವಿ (3ನಿ, 9:31 ಸೆ) ಹೆಸರಿನಲ್ಲಿದ್ದ ದಾಖಲೆ ಮುರಿದರು. ಮದ್ರಾಸ್ ವಿವಿ (3ನಿ 9:17ಸೆ) ಕೂಡ ದಾಖಲೆ ಮೀರಿತು.
ಮದ್ರಾಸ್ ವಿವಿ ಚಾಂಪಿಯನ್:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮತ್ತು ಭಾರತೀಯ ವಿವಿಗಳ ಸಂಘ ಆಯೋಜಿಸಿದ್ದ ಈ ಕೂಟದಲ್ಲಿ ಕಳೆದ ಬಾರಿಯ ಸಮಗ್ರ ಚಾಂಪಿಯನ್ ಮಂಗಳೂರು ವಿವಿಯನ್ನು ಹಿಂದಿಕ್ಕಿ ಮದ್ರಾಸ್ ವಿವಿ ಚಾಂಪಿಯನ್ ಪಟ್ಟಕ್ಕೇರಿತು. ಪುರುಷರು ತಂದುಕೊಟ್ಟ 74 ಪಾಯಿಂಟ್‌ಗಳೊಂದಿಗೆ 134 ಪಾಯಿಂಟ್‌ಗಳನ್ನು ಮದ್ರಾಸ್ ವಿವಿ ಕಲೆ ಹಾಕಿತು. ಮಂಗಳೂರು ವಿವಿ (109 ಪಾಯಿಂಟ್ಸ್) ಎರಡನೇ ಸ್ಥಾನ ಗಳಿಸಿತು. ಮೂರನೇ ಸ್ಥಾನ ಚಂಡೀಗಢ ವಿವಿಯ ಪಾಲಾಯಿತು.
ಪುರುಷರ ವಿಭಾಗದಲ್ಲಿ ಮದ್ರಾಸ್, ಮಂಗಳೂರು ಮತ್ತು ರೋಹ್ಟಕ್‌ನ ಎಂ.ಡಿ ವಿವಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರೆ ಮಹಿಳೆಯರ ವಿಭಾಗದಲ್ಲಿ ಚಂಡೀಗಢ, ಮದ್ರಾಸ್ ಮತ್ತು ಮಂಗಳೂರು ವಿವಿ ಮೊದಲ ಮೂರು ಸ್ಥಾನ ಗಳಿಸಿದವು.
ಪುರುಷರ ಹ್ಯಾಮರ್ ಥ್ರೋದಲ್ಲೂ ಮಂಗಳೂರು ವಿವಿಗೆ ಚಿನ್ನ ಒಲಿಯಿತು. 61.74 ಮೀ ದೂರ ಎಸೆದ ಮೊಹಮ್ಮದ್ ನದೀಂ ಮೊದಲಿಗರಾದರು. ಇದರೊಂದಿಗೆ ಒಟ್ಟು 6 ಚಿನ್ನ, ತಲಾ 5 ಬೆಳ್ಳಿ ಹಾಗೂ ಕಂಚಿನ ಪದಕಗಳು ಮಂಗಳೂರು ವಿವಿಗೆ ಲಭಿಸಿದವು.
ಶುಕ್ರವಾರದ ಫಲಿತಾಂಶಗಳು: ಪುರುಷರು: 200 ಮೀಟರ್ಸ್ ಓಟ: ಗೋಕುಲ್ ಪಾಂಡ್ಯನ್ (ಎಸ್‌ಆರ್‌ಎಂ)–1. ಕಾಲ: 21.22 ಸೆ., ಪ್ರಸನ್ನ ಕುಮಾರ್ ಮಣ್ಣೂರ (ಧಾರವಾಡ)–2, ಎಸ್.ಆರ್ ರೋಹನ್ (ಎಂ.ಜಿ ಕೋಟಯಂ)–3; 5 ಸಾವಿರ ಮೀ ಓಟ: ಗೌರವ್ (ಮಹಾತ್ಮ ಜ್ಯೋತಿಬಾ ಫುಲೆ ವಿವಿ)–1. ಕಾಲ:14ನಿ 4.1ಸೆ, ಪ್ರಿನ್ಸ್‌ರಾಜ್ ಯಾದವ್ (ಆದಿಕವಿ ಮಹರ್ಷಿ)–2, ಸಚಿನ್ ಯಾದವ್ (ಆರ್‌ಐಎಂಟಿ)–3; 4x100 ಮೀ. ರಿಲೆ: ಮದ್ರಾಸ್–1. ಕಾಲ: 40.69 ಸೆ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ-2, ಕ್ಯಾಲಿಕಟ್-3; 4x400 ಮೀ ರಿಲೆ: ಮಂಗಳೂರು (ಸಾಕೇತ್, ಕೇಶವನ್, ಪ್ರಥಮೇಶ್, ಆಕಾಶ್ ರಾಜ್)–1. ಕಾಲ: 3ನಿ 8.45ಸೆ; ಕೂಟ ದಾಖಲೆ (ಹಿಂದಿನ ದಾಖಲೆ: ಕೇರಳ ವಿವಿ 3ನಿ 9:31ಸೆ; 2024), ಮದ್ರಾಸ್ –2, ಪಂಜಾಬ್–3; ಲಾಂಗ್‌ಜಂಪ್: ಸಾರುಣ್ ಪಾಯಾಸಿಂಗ್ (ಸಂಭಲ್‌ಪುರ್)–1. ಅಂತರ: 7.43ಮೀ, ಶಾರೋನ್ ಜಸ್ಟಸ್ (ಮನೋನ್ಮಣಿಯಮ್)–2, ಯಶ್ ಖಾನ್ವಿಳ್ಕರ್ (ಮುಂಬೈ)–3; ಹ್ಯಾಮರ್ ಥ್ರೋ: ಮೊಹಮ್ಮದ್ ನದೀಮ್ (ಮಂಗಳೂರು)–1. ದೂರ: 61.74ಮೀ, ಮುತ್ತಪ್ಪ (ಯೆನೆಪೋಯ)–2, ಜತಿನ್ ಕುಮಾರ್ (ಪಿಡಿಯುಎಸ್‌ಯು)–3.
ಮಹಿಳೆಯರು: 200 ಮೀ ಓಟ: ಪ್ರತಿಭಾ ಸೆಲ್ವರಾಜ್ (ಮದ್ರಾಸ್)–1. ಕಾಲ: 24.11ಸೆ, ಶ್ರೀನಾ ಎನ್ (ಎಂ.ಜಿ ಕೋಟಯಂ)–2, ಸೋನಿಯಾ (ಚಂಡೀಗಢ)–3; 5 ಸಾವಿರ ಮೀ ಓಟ: ಸೋನಿ ದೇವಿ (ಆದಿಕವಿ ಶ್ರೀ ಮಹರ್ಷಿ)–1. ಕಾಲ: 16ನಿ 50.98ಸೆ, ಪೌರ್ಣಮಿ ಎನ್ (ಎಂ.ಜಿ, ಕೋಟಯಂ)–2, ಮಿಲಾಲಿ ದೀಪಕ್ (ರಾಷ್ಟ್ರಸಂತ್ ತುಕ್ಡೋಜಿ)–3; 4x100 ಮೀ ರಿಲೆ: ಎಂಜಿ, ಕೋಟಯಂ-1. ಕಾಲ: 46.20 ಸೆ, ಮದ್ರಾಸ್–2, ಗುರುನಾನಕ್ ದೇವ್-3; 4x400 ಮೀ ರಿಲೆ: ಪಂಜಾಬಿ–1. ಕಾಲ: 3ನಿ 42.65ಸೆ, ಮದ್ರಾಸ್ –2, ಮಂಗಳೂರು–3; ಹೈಜಂಪ್: ಪೂಜಾ (ಲವ್ಲಿ)–1. ಎತ್ತರ: 1.85 ಮೀ; ಕೂಟ ದಾಖಲೆ (ಹಿಂದಿನ ದಾಖಲೆ: ಗ್ರೇಸ್ನಾ ಮರ್ಲಿ, 1.84ಮೀ; 2022), ಜೋನಿಕಾ ಪಹಲ್ (ಚಂಡೀಗಢ)–2, ಜಾಮೋದ್ ಪಾಯಲ್‌ಬೆನ್ (ಸ್ವರ್ಣಿಮ್ ಗುಜರಾತ್)–3; ಹ್ಯಾಮರ್ ಥ್ರೋ: ತಾನ್ಯಾ ಚೌಧರಿ (ಚಂಡೀಗಢ)–1. ದೂರ: 65.60ಮೀ; ಕೂಟ ದಾಖಲೆ (ಹಿಂದಿನ ದಾಖಲೆ: ತಾನ್ಯಾ ಚೌಧರಿ, 62.62 ಮೀ; 2023), ನಂದಿನಿ (ಚಂಡೀಗಢ)–2, ಗ್ರೀಮಾ (ಲವ್ಲಿ, ಪಂಜಾಬ್)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.