ADVERTISEMENT

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಕರೊಲಿನಾ, ಅಕ್ಸೆಲ್ಸ್‌ನ್‌ಗೆ ಸತತ ಪ್ರಶಸ್ತಿ

ಏಜೆನ್ಸೀಸ್
Published 24 ಜನವರಿ 2021, 12:11 IST
Last Updated 24 ಜನವರಿ 2021, 12:11 IST
ಕರೊಲಿನಾ ಮರಿನ್ ಅವರು ಷಟಲ್ ಹಿಂದಿರುಗಿಸಿದ ರೀತಿ –ಎಎಫ್‌ಪಿ ಚಿತ್ರ
ಕರೊಲಿನಾ ಮರಿನ್ ಅವರು ಷಟಲ್ ಹಿಂದಿರುಗಿಸಿದ ರೀತಿ –ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌: ಕಳೆದ ವಾರ ನಡೆದ ವರ್ಷದ ಮೊದಲ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಮತ್ತು ಸ್ಪೇನ್‌ನ ಕರೊಲಿನಾ ಮರಿನ್ ಭಾನುವಾರ ಮುಕ್ತಾಯಗೊಂಡ ಎರಡನೇ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲೂ ಚಾಂಪಿಯನ್ ಆದರು.

ಪುರುಷರ ವಿಭಾಗದ ಫೈನಲ್‌ನಲ್ಲಿ ಅಕ್ಸೆಲ್ಸನ್ ತಮ್ಮದೇ ದೇಶದ ಹ್ಯಾನ್ಸ್ ಕ್ರಿಸ್ಟಿಯನ್ ಸಾಲ್ಬರ್ಗ್‌ ವಿಟಿಂಗಸ್‌ ಎದುರು 21-11, 21-7ರಲ್ಲಿ ಜಯ ಗಳಿಸಿದರು. ಕರೊಲಿನಾ ಮರಿನ್ ಚೀನಾ ಥೈಪೆಯ ತಾಯ್‌ ಜು ಯಿಂಗ್ ವಿರುದ್ಧ 21–19, 21–17ರಲ್ಲಿ ಗೆಲುವು ಸಾಧಿಸಿದರು. ತಾಯ್ ಜು ಯಿಂಗ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದರು.

ಹಾಲಿ ಒಲಿಂಪಿಕ್ಸ್‌ ಚಾಂಪಿಯನ್, 27 ವರ್ಷದ ಕರೊಲಿನಾ ಮರಿನ್ ಕಳೆದ ವಾರ ಒಂದೂ ಗೇಮ್ ಸೋಲದೆ ಪ್ರಶಸ್ತಿ ಗೆದ್ದಿದ್ದರು. ಈ ವಾರವೂ ಅದೇ ರೀತಿಯ ಸಾಧನೆ ಅವರಿಂದ ಮೂಡಿಬಂತು. ಮೊದಲ ಟೂರ್ನಿಯ ಫೈನಲ್‌ನಲ್ಲಿ ಸುಲಭ ಜಯ ಗಳಿಸಿದ್ದರೆ, ಈ ಬಾರಿ ಫೈನಲ್‌ನಲ್ಲಿ ಅವರಿಗೆ ಕಠಿಣ ಪೈಪೋಟಿ ಎದುರಾಗಿತ್ತು. 26 ವರ್ಷದ ಥೈಪೆ ಆಟಗಾರ್ತಿ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಎರಡನೇ ಗೇಮ್‌ನ ಕೊನೆಯಲ್ಲಿ ತಾಯ್‌ ನಾಲ್ಕು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿದರು. ಆದರೆ ಆಗಲೇ ಕರೊಲಿನ್ ಗೆಲುವಿನತ್ತ ಹೆಜ್ಜೆ ಹಾಕಿ ಆಗಿತ್ತು.

ADVERTISEMENT

‘ಎರಡು ವಾರಗಳಲ್ಲಿ ಎರಡು ಟೂರ್ನಿಗಳ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ. ಈ ವರ್ಷದಲ್ಲಿ ಸಾಧನೆ ಮಾಡಲು ಈ ಮೂಲಕ ಅತ್ಯುತ್ತಮ ಹಾದಿ ತೆರೆದಂತಾಗಿದೆ. ಈ ಬಾರಿ ಹೊಸತನದೊಂದಿಗೆ ಹೊಸ ಆಟಗಾರ್ತಿಯಾಗಿ ಬೆಳೆಯಲಿದ್ದೇನೆ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ಸಹ ಆಟಗಾರರಿಗೂ ತಿಳಿಸಿದ್ದೆ. ಅದಕ್ಕೆ ತಕ್ಕಂತೆ ಆಡಲು ಸಾಧ್ಯವಾಗಿದೆ’ ಎಂದು ಕರೊಲಿನಾ ಹೇಳಿದರು.

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಏಷ್ಯಾದ ಹೊರಗಿನ ಮೊದಲ ಮಹಿಳಾ ಆಟಗಾರ್ತಿ ಎಂಬ ಖ್ಯಾತಿ ಗಳಿಸಿದ್ದ ಕರೊಲಿನಾ 2019ರಲ್ಲಿ ಮೊಣಕಾಲಿಗೆ ಗಾಯಗೊಂಡು ಬಳಲಿದ್ದರು. ಆದರೂ ಚೇತರಿಸಿಕೊಂಡು ಮುನ್ನುಗ್ಗಿದ್ದಾರೆ.

ಅಕ್ಸೆಲ್ಸನ್ ಅಮೋಘ ಆಟ

ಅಂಗಣದ ತುಂಬ ಓಡಾಡಿ ಪಾಯಿಂಟ್‌ಗಳನ್ನು ಕಲೆ ಹಾಕಿದ 27 ವರ್ಷದ ಅಕ್ಸೆಲ್ಸನ್ 35 ವರ್ಷದ ಎದುರಾಳಿಯನ್ನು ಸುಲಭವಾಗಿ ಮಣಿಸಿದರು. ವಿಶ್ವ ಕ್ರಮಾಂಕದಲ್ಲಿ 42ನೇ ಸ್ಥಾನದಲ್ಲಿರುವ ವಿಟಿಂಗಸ್ ಯಾವ ಹಂತದಲ್ಲೂ ಅಕ್ಸೆಲ್ಸನ್‌ಗೆ ಸರಿಸಾಟಿಯಾಗಲಿಲ್ಲ. 40 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಎದುರಾಳಿ ತಪ್ಪುಗಳನ್ನು ಎಸಗಲು ಪ್ರಚೋದಿಸಿ ಯಶಸ್ವಿಯಾದ ಅಕ್ಸೆಲ್ಸನ್‌ ಸುದೀರ್ಘ ರ‍್ಯಾಲಿಗಳಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಿ ಪಾಯಿಂಟ್‌ಗಳನ್ನು ಗಳಿಸಿದರು.

ಮಹಿಳಾ ಡಬಲ್ಸ್‌ ಫೈನಲ್‌ನಲ್ಲಿ ಕೊರಿಯಾದ ಕಿಮ್ ಸೋ ಯೆಂಗ್‌ ಮತ್ತು ಕಾಂಗ್‌ ಹೀ ಯಂಗ್ ತಮ್ಮದೇ ದೇಶದ ಲೀ ಸೋ ಹೀ ಮತ್ತು ಶಿನ್ ಸೆಂಗ್ ಚಾನ್ ವಿರುದ್ಧ 21-18, 21-19ರಲ್ಲಿ ಜಯ ಸಾಧಿಸಿದರು. ಪುರುಷರ ಡಬಲ್ಸ್‌ನಲ್ಲಿ ಚೀನಾ ಥೈಪೆಯ ಲೀ ಯಂಗ್ ಮತ್ತು ವಾಂಗ್‌ ಚಿ ಲಿನ್ ಜೋಡಿ ಮಲೇಷ್ಯಾದ ಆ್ಯರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ವಿರುದ್ಧ 21-13, 21-18 ಜಯ ಸಾಧಿಸಿತು. ಮಿಶ್ರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಸಪ್‌ಸಿರಿ ತೆರಟಂಚಾಯಿ ಮತ್ತು ಡೆಂಚಾಪೊಲ್ ಪುವವರನುಕ್ರೊ ಜೋಡಿ ಕೊರಿಯಾದ ಸೀ ಸೆಂಗ್ ಯೇ ಮತ್ತು ಚಾಯ್ ಯುಜುಂಗ್ ಅವರನ್ನು 21-16, 22-20ರಲ್ಲಿ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.