ADVERTISEMENT

ಯೋಗ ಮಾಡಲಿದ್ದಾರೆ ಮೇರಿ ಕೋಮ್ ಹಾಗೂ ಅಂಜುಮ್ ಮೌದ್ಗಿಲ್

ಪಿಟಿಐ
Published 20 ಜೂನ್ 2020, 13:49 IST
Last Updated 20 ಜೂನ್ 2020, 13:49 IST
ಮೇರಿ ಕೋಮ್ –ಪಿಟಿಐ ಚಿತ್ರ
ಮೇರಿ ಕೋಮ್ –ಪಿಟಿಐ ಚಿತ್ರ   

ನವದೆಹಲಿ: ಮಹಿಳಾ ಬಾಕ್ಸಿಂಗ್‌ನ ಮಿನುಗು ತಾರೆ, ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಶೂಟರ್ ಅಂಜುಮ್ ಮೌದ್ಗಿಲ್ ಅವರು ನಟಿ ಶಿಲ್ಪಾ ಶೆಟ್ಟಿ ಆನ್‌ಲೈನ್ ಮೂಲಕ ಭಾನುವಾರ ನಡೆಸಿಕೊಡಲಿರುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಆಸನಗಳನ್ನು ಹಾಕಲಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿಕೇಂದ್ರ ಸರ್ಕಾರದ ‘ಫಿಟ್ ಇಂಡಿಯಾ’ ಯೋಜನೆಯಡಿ 45 ನಿಮಿಷಗಳ ಯೋಗ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಯುಷ್ ಇಲಾಖೆಯು ಯೋಗದ ಮೂಲಕ ಕೌಟುಂಬಿಕ ಮೋಜು ಎಂಬ ಹೆಸರು ನೀಡಿದ್ದು ಕೊರೊನಾ ಹಾವಳಿಯಿಂದಾಗಿ ಸಾಮೂಹಿಕ ಯೋಗ ಮಾಡಲು ಅವಕಾಶವಿಲ್ಲದ ಕಾರಣ ಮನೆಯಲ್ಲೇ ಯೋಗ ಮಾಡಲು ಕರೆ ನೀಡಿದೆ.

‘ರಿಜಿಜು ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ಯೋಗ ಮಾಡಲು ಮತ್ತು ಅವರ ಅನುಭವಗಳನ್ನು ಕೇಳಲು ಕಾತರಳಾಗಿದ್ದೇನೆ. ಯೋಗದ ಕುರಿತು ಅರಿವು ಮೂಡಿಸಲು ಮತ್ತು ಅದರಿಂದ ಆಗುವ ಲಾಭವನ್ನು ಜನರಿಗೆ ತಿಳಿಸಲು ಪ್ರಯತ್ನಿಸುವೆ. ನಮ್ಮನ್ನು ನೋಡಿ ಮಕ್ಕಳು ಯೋಗದ ಬಗ್ಗೆ ಆಸಕ್ತಿ ಹೊಂದಿದರೆ ಅದುವೇ ಸಂತೋಷದ ವಿಷಯ’ ಎಂದು ಅಂಜುಮ್ ಮೌದ್ಗಿಲ್ ಹೇಳಿದರು.

ADVERTISEMENT

‘ಕ್ರೀಡಾ ಸಚಿವರು ಮತ್ತು ಹೆಸರಾಂತ ಕ್ರೀಡಾಪಟುಗಳ ಜೊತೆ ಯೋಗ ನಡೆಸಿಕೊಡಲಿದ್ದೇನೆ. ಎಲ್ಲರೂ ಕುಟುಂಬ ಸಮೇತರಾಗಿ ನಮ್ಮೊಂದಿಗೆ ಸೇರಿ ಯೋಗ ಮಾಡಿ. ಈ ಮೂಲಕ ಆರೋಗ್ಯವಂತ ಮತ್ತು ಫಿಟ್‌ ಆಗಿರುವ ಭವಿಷ್ಯ ರೂಪಿಸೋಣ’ ಎಂದು ಶಿಲ್ಪಾ ಶೆಟ್ಟಿ ಕರೆ ಹೇಳಿದ್ದಾರೆ.

ಸಂಜೆ ಐದು ಗಂಟೆಗೆ ಯೋಗ ಆರಂಭವಾಗಲಿದ್ದು ಫಿಟ್‌ ಇಂಡಿಯಾದ ಯುಟ್ಯೂಬ್ ಪುಟದಲ್ಲಿ ನೇರ ಪ್ರಸಾರ ಇರುತ್ತದೆ. ಶಿಲ್ಪಾ ಶೆಟ್ಟಿ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲೂ ನೇರ ಪ್ರಸಾರ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.