ADVERTISEMENT

ಮಿನಿ ಗೇಮ್ಸ್‌: ಬೆಂಗಳೂರಿಗೆ ಸಮಗ್ರ ಪ್ರಶಸ್ತಿ

ಉಡುಪಿಯ ಪ್ರಕುಲ್‌, ಉತ್ತರಕನ್ನಡದ ಪೂರ್ವಿಗೆ ಶ್ರೇಷ್ಠ ಅಥ್ಲೀಟ್‌ ಗೌರವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 18:44 IST
Last Updated 9 ನವೆಂಬರ್ 2025, 18:44 IST
<div class="paragraphs"><p>ಬಾಲಕಿಯರ ಕೊಕ್ಕೊ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಮೈಸೂರು ತಂಡಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ&nbsp;ಟ್ರೋಫಿ ಹಸ್ತಾಂತರಿಸಲಾಯಿತು.</p></div>

ಬಾಲಕಿಯರ ಕೊಕ್ಕೊ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಮೈಸೂರು ತಂಡಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ಹಸ್ತಾಂತರಿಸಲಾಯಿತು.

   

ಬೆಂಗಳೂರು: ಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಆತಿಥೇಯ ಬೆಂಗಳೂರು ತಂಡವು ಭಾನುವಾರ ಮುಕ್ತಾಯಗೊಂಡ 4ನೇ ‘ರಾಜ್ಯ ಮಿನಿ ಗೇಮ್ಸ್‌’ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಆತಿಥೇಯ ಆಟಗಾರರು ಒಟ್ಟು 404 ಪದಕ (135 ಚಿನ್ನ, 128 ಬೆಳ್ಳಿ, 141 ಕಂಚು) ಜಯಿಸಿ ಪಾರಮ್ಯ ಮೆರೆದರೆ, ಬೆಳಗಾವಿ ಜಿಲ್ಲಾ ತಂಡವು 100 ಪದಕಗಳೊಂದಿಗೆ (28 ಚಿನ್ನ, 34 ಬೆಳ್ಳಿ, 38 ಕಂಚು) ಒಟ್ಟಾರೆ ಎರಡನೇ ಸ್ಥಾನ ಪಡೆಯಿತು. ಮೈಸೂರು ಜಿಲ್ಲಾ ತಂಡವು ಒಟ್ಟಾರೆ 57 ಪದಕಗಳನ್ನು (18 ಚಿನ್ನ, 12 ಬೆಳ್ಳಿ, 27 ಕಂಚು) ಗಳಿಸಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.

ADVERTISEMENT

ಉಡುಪಿಯ ಪ್ರಕುಲ್‌ ಆರ್‌. ಕುಂದರ್‌ (783 ಪಾಯಿಂಟ್ಸ್‌) ಬಾಲಕರ ವಿಭಾಗದ ಶ್ರೇಷ್ಠ ಅಥ್ಲೀಟ್‌ ಎನಿಸಿದರೆ, ಬಾಲಕಿಯರ ವಿಭಾಗದಲ್ಲಿ ಉತ್ತರಕನ್ನಡದ ಪೂರ್ವಿ ಟಿ.ಎಚ್‌. (822 ಪಾಯಿಂಟ್ಸ್) ಈ ಗೌರವಕ್ಕೆ ಭಾಜನರಾದರು.

ಬೆಂಗಳೂರಿನ ಸುಬ್ರಹ್ಮಣ್ಯ ಜೀವಾಂಶ್‌ ಹಾಗೂ ಶರಣ್‌ ಎಸ್‌. ಅವರು ಬಾಲಕರ ವಿಭಾಗದ ಅತ್ಯುತ್ತಮ ಈಜುಪಟು ಗೌರವ ಪಡೆದರು. ಸುಮನ್ವಿ ವಿ. (ಬೆಂಗಳೂರು) ಅವರು ಅತ್ಯುತ್ತಮ ಈಜುಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಅಂತಿಮ ದಿನ ನಡೆದ ಬಾಲಕರ ಕೊಕ್ಕೊ ಸ್ಪರ್ಧೆಯಲ್ಲಿ ಆತಿಥೇಯ ಬೆಂಗಳೂರು ತಂಡವು 16–6ರಿಂದ ಬಾಗಲಕೋಟೆ ತಂಡವನ್ನು ಮಣಿಸಿ ಚಿನ್ನ ತನ್ನದಾಗಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದ ಬೆಳಗಾವಿ ಮತ್ತು ಧಾರವಾಡ ತಂಡಗಳು ಕಂಚಿಗೆ ತೃಪ್ತಿಪಡಬೇಕಾಯಿತು. ರೋಚಕವಾಗಿ ನಡೆದ ಬಾಲಕಿಯರ ಫೈನಲ್‌ನಲ್ಲಿ ಮೈಸೂರು ತಂಡವು 14–10ರಿಂದ ಬೆಳಗಾವಿ ತಂಡವನ್ನು ಸೋಲಿಸಿ, ಪ್ರಶಸ್ತಿ ಎತ್ತಿ ಹಿಡಿಯಿತು. ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲಾ ತಂಡಗಳು ಕಂಚಿನ ಪದಕ ಜಯಿಸಿದವು.

ಹಾಕಿಯಲ್ಲಿ ಹಾಸನ ಪ್ರಾಬಲ್ಯ: ಹಾಕಿ ಸ್ಪರ್ಧೆಯಲ್ಲಿ ಹಾಸನ ಜಿಲ್ಲಾ ತಂಡವು ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಪ್ರಾಬಲ್ಯ ಸಾಧಿಸಿತು. ಸಂಘಟಿತ ಆಟವಾಡಿದ ಹಾಸನ ತಂಡವು ಬಾಲಕರ ಫೈನಲ್‌ನಲ್ಲಿ 4–0ಯಿಂದ ಬಳ್ಳಾರಿ ತಂಡವನ್ನು ಸುಲಭವಾಗಿ ಮಣಿಸಿತು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಹಾಸನ ತಂಡವು 8–0ಯಿಂದ ಧಾರವಾಡ ತಂಡದ ವಿರುದ್ಧ ನಿರಾಯಾಸ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.