ಅಹಮದಾಬಾದ್: ವೇಟ್‌ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಅವರು ತಮ್ಮ ವೃತ್ತಿಜೀವನದಲ್ಲಿ ಅದ್ದೂರಿ ಪುನರಾರಂಭ ಮಾಡಿದ್ದಾರೆ.
ಸೋಮವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೀರಾಬಾಯಿ ಅವರು ಚಿನ್ನ ಗೆದ್ದರು. ಮೀರಾ ಅವರು ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದರು. ಒಟ್ಟು 193 ಕೆಜಿ (84ಕೆಜಿ+109ಕೆಜಿ) ತೂಕ ಎತ್ತಿ ಮೊದಲಿಗರಾದರು.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ಅದರ ನಂತರ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಗಾಯದಿಂದಾಗಿ ಸ್ಪರ್ಧೆಯಿಂದ ದೂರವುಳಿದಿದ್ದರು. ಸುಮಾರು ಒಂದು ವರ್ಷದ ನಂತರ ಸ್ಪರ್ಧಾಕಣಕ್ಕೆ ಮರಳಿದ ಅವರು ಚಿನ್ನದ ಆರಂಭ ಮಾಡಿದರು.
ಅವರು ಈ ಮೊದಲು 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಒಲಿಂಪಿಕ್ ಕೂಟದಿಂದ ಈ ತೂಕದ ವಿಭಾಗವನ್ನು ಕೈಬಿಡಲಾಗಿದೆ. ಆದ್ದರಿಂದ ಅವರು 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.