ADVERTISEMENT

ಮೌಂಟ್‌ಎವರೆಸ್ಟ್ ಆರೋಹಣ: ನಕಲಿ ದಾಖಲೆ ನೀಡಿ ಪ್ರಶಸ್ತಿ ಕಳೆದುಕೊಂಡ ನರೇಂದ್ರ ಯಾದವ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 12:56 IST
Last Updated 11 ಫೆಬ್ರುವರಿ 2021, 12:56 IST
ನರೇಂದ್ರ ಯಾದವ್   –ಟ್ವಿಟರ್ ಚಿತ್ರ
ನರೇಂದ್ರ ಯಾದವ್   –ಟ್ವಿಟರ್ ಚಿತ್ರ   

ನವದೆಹಲಿ:ಮೌಂಟ್‌ ಎವರೆಸ್ಟ್ ಆರೋಹಣ ಮಾಡಿರುವುದಾಗಿ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿದ್ದ ಆರೋಪದಲ್ಲಿ ಪರ್ವತಾರೋಹಿ ನರೇಂದ್ರಸಿಂಗ್ ಯಾದವ್‌ ಅವರ ವಿರುದ್ಧ ಕೇಂದ್ರ ಕ್ರೀಡಾ ಸಚಿವಾಲಯ ಕ್ರಮ ತೆಗೆದುಕೊಳ್ಳಲಿದೆ.

ಈ ವರ್ಷದ ತೆನ್‌ಸಿಂಗ್ ನೋರ್ಗೆ ಕ್ರೀಡಾಪ್ರಶಸ್ತಿಗೆ ಯಾದವ್ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಇದೀಗ ಅವರನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ಯಾದವ್ ಅವರ ಜೋಡಿ ಪರ್ವತಾರೋಹಿ ಸೀಮಾ ರಾಣಿ ಅವರ ಮೇಲೂ ನೇಪಾಳ ಸರ್ಕಾರವು ನಿಷೇಧ ಹೇರಿತ್ತು. ಇನ್ನು ಮುಂದಿನ ಆರು ವರ್ಷಗಳವರೆಗೆ ಅವರು ಹಿಮಾಲಯದಲ್ಲಿ ಅವರು ಪರ್ವತಾರೋಹಣ ಮಾಡುವಂತಿಲ್ಲ. ಇಲ್ಲಿಯವರೆಗೆ ಅವರು ಭಾಗವಹಿಸಿದ್ದರೆನ್ನಲಾದ ಎವರೆಸ್ಟ್ ಸಮಿಟ್ ಪ್ರಮಾಣಪತ್ರಗಳನ್ನೂ ಸರ್ಕಾರವು ಜಪ್ತಿ ಮಾಡಿಕೊಂಡಿದೆ. ಯಾದವ್ ಮತ್ತು ಸೀಮಾ ಅವರು 2016ರಲ್ಲಿ ವಿಶ್ವದ ಅತಿ ಎತ್ತರದ ಎವರೆಸ್ಟ್ ಪರ್ವತ ಏರಿದ್ದಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು. ಇವರ ತಂಡದಲ್ಲಿದ್ದ ನಾಬಾಕುಮಾರ್ ಫುಕಾನ್ ಮೇಲೂ ನಿಷೇಧ ಹೇರಲಾಗಿದೆ.

ADVERTISEMENT

’ನರೇಂದ್ರಸಿಂಗ್ ಯಾದವ್ ಸಲ್ಲಿಸಿದ್ದ ದಾಖಲೆಗಳ ಸಮಗ್ರ ಪರಿಶೀಲನೆಯನ್ನು ನಮ್ಮ ಸಚಿವಾಲಯದ ತಂಡವು ಮಾಡಿತ್ತು. ಸಂಶಯದಿಂದ ಅವರ ಮೇಲೆ ತನಿಖೆ ಆರಂಭಿಸಿದಾಗ ಸುಳ್ಳು ದಾಖಲೆಗಳನ್ನು ನೀಡಿದ್ದು ದೃಢಪಟ್ಟಿತು. ಅವರು ಸಲ್ಲಿಸಿದ್ದ ಛಾಯಾಚಿತ್ರಗಳೂ ನಕಲಿಯಾಗಿವೆ. 2020ರಲ್ಲಿ ಅವರಿಗೆ ಪ್ರತಿಷ್ಠಿತ ತೆನ್‌ಸಿಂಗ್ ನೊರ್ಗೆ ಪುರಸ್ಕಾರ ನೀಡಲು ಉದ್ದೇಶಿಸಲಾಗಿತ್ತು. ಇದೀಗ ಅವರ ಹೆಸರನ್ನು ರದ್ದುಮಾಡಲಾಗಿದೆ‘ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.