ADVERTISEMENT

ಮೈಸೂರಿನ ಪುಟ್ಟ ಪ್ರಣತಿಯ ಪದಕ ಬೇಟೆ! ‘ವುಶು’ನಲ್ಲಿ 3 ಚಿನ್ನ, 2 ಕಂಚು ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 11:27 IST
Last Updated 12 ಅಕ್ಟೋಬರ್ 2022, 11:27 IST
ಪದಕ ಗೆದ್ದ ಖುಷಿಯಲ್ಲಿ ಪ್ರಣತಿ
ಪದಕ ಗೆದ್ದ ಖುಷಿಯಲ್ಲಿ ಪ್ರಣತಿ    

ಮೈಸೂರು: ಚಿಟಪಟನೆ ಮಾತನಾಡುವ‍ಜಿ.ಪ್ರಣತಿ ಕೈಗಳು ಅಷ್ಟೇ ಗಟ್ಟಿ. ‘ವುಶು’ ಕ್ರೀಡೆಯ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಬೇಟೆಯಾಡಿರುವಆಕೆಯ ವಯಸ್ಸಿನ್ನೂ 8!

ಪೊಲೀಸ್‌ ಪಬ್ಲಿಕ್‌ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯು ತನಗಿಂತ ಹೆಚ್ಚು ವಯಸ್ಸಿನ ಸ್ಪರ್ಧಿಗಳ ಮುಂದೆ ಸಾಮರ್ಥ್ಯ ಮೆರೆದು 5 ಪದಕಗಳನ್ನು ದೋಚಿದ್ದಾರೆ. ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅವರು ಕೋಚ್‌ ಯು.ದರ್ಶನ್‌ ಅವರಿಂದ ವುಶು ಹಾಗೂ ಪೈಲ್ವಾನ್ ಮಧು ಬಳಿ ಕುಸ್ತಿಕಲಿಯುತ್ತಿದ್ದಾರೆ.

ಹ್ಯಾಟ್ರಿಕ್‌ ಚಿನ್ನ:2020ರಲ್ಲಿ ಗದಗ, 2021ರಲ್ಲಿ ಮಂಗಳೂರಿನ ಮೂಡಬಿದರೆ ಹಾಗೂ 2022ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ವುಶು ಚಾಂಪಿಯನ್‌ಷಿಪ್‌ನ 20 ಕೆ.ಜಿ ಒಳಗಿವರ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ADVERTISEMENT

2020ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ವುಶು ಚಾಂ‍ಪಿಯನ್‌ ಷಿಪ್‌ನಲ್ಲಿ ಭಾಗವಹಿಸಿದ್ದರು. ಮರು ವರ್ಷ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದರು. 2022ರಲ್ಲಿ ಹಿಮಾಚಲ ಪ್ರದೇಶದ ಮಂಡಿಯಲ್ಲೂ 11 ವರ್ಷ ಮೇಲ್ಪಟ್ಟ ವರನ್ನು ಸೋಲಿಸಿ ಕಂಚು ಗೆದ್ದರು.

ನಿತ್ಯ 4 ಗಂಟೆ ವುಶು ಅಭ್ಯಾಸ ನಡೆಸುವ ಆಕೆ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕೌಶಲ ತರಬೇತಿಯನ್ನು ನೀಡಿದ್ದರು. ದಸರಾ ಕ್ರೀಡಾಕೂಟದಲ್ಲಿ ಕ್ರೀಡಾ ಇಲಾಖೆಯೂ ಸನ್ಮಾನಿಸಿದೆ.

‍‘ಮಗಳಿಗೆ ತರಬೇತಿ ಆರಂಭಿಸಿದಾಗ ಮೂರೂವರೆ ವರ್ಷ. ಬಾಕ್ಸಿಂಗ್‌, ಕುಸ್ತಿ, ಮಾರ್ಷಲ್ ಆರ್ಟ್ಸ್‌ನ ಮಿಳಿತವಾಗಿರುವ ‘ವುಶು’– ಎಲ್ಲ ಸಮರಕಲೆಗಳ ತಾಯಿ. ಆರು ವರ್ಷವಾಗುವ ಹೊತ್ತಿಗೆ ಸ್ಪರ್ಧಿಸಲು ಬೇಕಾದ ಕೌಶಲ– ಸಾಮರ್ಥ್ಯವನ್ನು ಪಡೆದಿದ್ದ ಆಕೆ ಜಿಲ್ಲಾ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದು ಕೋಚ್‌ಗಳನ್ನೂ ಅಚ್ಚರಿಗೊಳಿಸಿದಳು’ ಎಂದು ಆಕೆಯ ತಂದೆ, ಗಾಯತ್ರಿಪುರಂ ಗಿರಿಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಅವರ ಪತ್ನಿ ಎಲ್‌.ಸಂಗೀತಾ ಅವರೂ ಬೆಂಬಲಿಸಿದ್ದಾರೆ.

‘ರಾಜ್ಯ ಮಟ್ಟದಲ್ಲಿ ಚಿನ್ನ ಗೆದ್ದಿರುವು ದರಿಂದ ಖೇಲೋ ಇಂಡಿಯಾದಲ್ಲಿ ರಾಜ್ಯ ಪ್ರತಿನಿಧಿಸುವುದು ಖಚಿತವಾ ಗಿದ್ದು ತಯಾರಿ ನಡೆಸಿದ್ದಾಳೆ’ ಎಂದರು.

‘ಏಷ್ಯನ್‌ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುತ್ತೇನೆ. ಐಪಿಎಸ್‌ ಅಥವಾ ಸೇನೆ ಸೇರಿ ಜನರ ಸೇವೆ ಮಾಡುತ್ತೇನೆ. ವಿಶೇಷ ಮಕ್ಕಳಿಗೆ ಶಾಲೆ ತೆರೆಯುತ್ತೇನೆ’ ಎನ್ನುವುದು ಪ್ರಣತಿಯ ಬಯಕೆ.

ಅಂತರರಾಷ್ಟ್ರೀಯ ಹೆಣ್ಣು ಮಗು ದಿನ:ಹೆಣ್ಣು ಮಕ್ಕಳು ಜಗತ್ತಿನಾದ್ಯಂತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಹಾಗೂ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅ.11 ಅನ್ನು ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನವೆಂದು 2011ರ ಡಿ.19ರಂದು ಘೋಷಿಸಿತು. 2012ರ ಅ.11ರಿಂದ ನಡೆಯುತ್ತಿರುವ ದಿನಾಚರಣೆಗೆ ದಶಕದ ಸಂಭ್ರಮ ಇಂದು.‘ಇದು ನಮ್ಮ ಸಮಯ– ನಮ್ಮ ಹಕ್ಕುಗಳು, ನಮ್ಮ ಭವಿಷ್ಯಕ್ಕಾಗಿ’– ಇದು ಘೋಷವಾಕ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.