ADVERTISEMENT

‘ನಾಡಾ’ದಿಂದ ಎಬಿಪಿ ಯೋಜನೆ

ಹೆಚ್ಚುತ್ತಿರುವ ಉದ್ದೀಪನ ಮದ್ದು ಸೇವನೆ ಪ್ರಕರಣ: ಸಚಿವ ರಿಜಿಜು ಕಳವಳ

ಪಿಟಿಐ
Published 11 ಡಿಸೆಂಬರ್ 2019, 1:49 IST
Last Updated 11 ಡಿಸೆಂಬರ್ 2019, 1:49 IST

ನವದೆಹಲಿ: ಅಥ್ಲೀಟುಗಳ ಜೈವಿಕ ಅಂಶಗಳನ್ನು ಕಾಲಕಾಲಕ್ಕೆ ದಾಖಲಿಸುವ (ಅಥ್ಲೀಟ್ಸ್‌ ಬಯಾಲಾಜಿಕಲ್‌ ಪಾಸ್‌ಪೋರ್ಟ್‌– ಎಬಿಪಿ) ಮೂಲಕ ಉದ್ದೀಪನ ಮದ್ದು ಸೇವನೆ ಪಿಡುಗಿಗೆ ತಡೆಹಾಕುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕ (ನಾಡಾ) ಆರಂಭಿಸಿದೆ.

ಮೊದಲ ಹಂತವಾಗಿ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳು ಇದಕ್ಕೆ ಒಳಪಡಲಿದ್ದಾರೆ ಎಂದು ‘ನಾಡಾ’ ಮಹಾ ನಿರ್ದೇಶಕ ನವೀನ್‌ ಅಗರವಾಲ್‌ ಮಂಗಳವಾರ ತಿಳಿಸಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಥ್ಲೀಟುಗಳೂ ಹಂತ ಹಂತವಾಗಿ ಇದರ ವ್ಯಾಪ್ತಿಗೆ ಬರಲಿದ್ದಾರೆ. ಹಾರ್ಮೋನುಗಳ ಬೆಳವಣಿಗೆಗೆ ಕ್ರೀಡಾಪಟುಗಳು ತೆಗೆದುಕೊಳ್ಳುವ ಮದ್ದುಗಳನ್ನು ಸುಲಭಕ್ಕೆ ಪತ್ತೆ ಹಚ್ಚುವುದು ಕಷ್ಟ. ಕಾಲಮಿತಿಯ ಇಂಥ ಪರೀಕ್ಷೆಯಿಂದ ಇದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ‘ಎಬಿಪಿ’ಯು ಅಥ್ಲೀಟುಗಳ ಜೈವಿಕ ಮಾದರಿಯ ಮೇಲೆ ಕಣ್ಗಾವಲು ಇಡುವ ಕಾರಣ, ಮದ್ದು ಸೇವನೆ ಮಾಡಿದಲ್ಲಿ ಅದರ ಪರಿಣಾಮ ಪರೀಕ್ಷೆ ವೇಳೆ ಬಯಲಾಗುತ್ತದೆ.

ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ ವೇಳೆ ದೇಶದ ಅಥ್ಲೀಟುಗಳ ಮೇಲೆ ಉದ್ದೀಪನ ಮದ್ದು ಸೇವನೆ ಕಳಂಕ ತಟ್ಟದಂತೆ ‘ಎಬಿಪಿ’ ಯೋಜನೆ ಪರಿಚಯಿಸಲಾಗುತ್ತಿದೆ ಎಂದು ಅಗರವಾಲ್‌ ವಿವರಿಸಿದ್ದಾರೆ.

ADVERTISEMENT

ರಿಜಿಜು ಆತಂಕ: ದೇಶದಲ್ಲಿ ಉದ್ದೀಪನ ಮದ್ದು ಸೇವನೆ ಹಗರಣಗಳು ಬಯಲಿಗೆ ಬರುತ್ತಿರುವುದು ಚಿಂತೆಗೀಡು ಮಾಡುವ ವಿಷಯ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಆತಂಕ ವ್ಯಕ್ತಪಡಿಸಿದ್ದಾರೆ.

ನಟ ಸುನೀಲ್‌ ಶೆಟ್ಟಿ ಅವರನ್ನು ‘ನಾಡಾ’ ರಾಯಭಾರಿಯಾಗಿ ಘೋಷಿಸಲು ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಟೋಕಿಯೊ ಒಲಿಂಪಿಕ್ಸ್‌ಗೆ ಕೇವಲ ಎಂಟು ತಿಂಗಳು ಉಳಿದಿರುವಂತೆ ಸಚಿವರ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ.

ಈ ವರ್ಷ ಎಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣಗಳು ವರದಿಯಾಗಿವೆ. 150ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ವರ್ಷ ಮದ್ದುಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಮೂರನೇ ಒಂದರಷ್ಟು ಮಂದಿ ದೇಹದಾರ್ಢ್ಯಪಟುಗಳು.

ಕಳಂಕಿತ ಕ್ರೀಡಾಪಟುಳನ್ನು ಪತ್ತೆಹಚ್ಚುವ ಮೂಲಕ ಭಾರತ ‘ಸ್ವಚ್ಛ ಕ್ರೀಡಾ ರಾಷ್ಟ್ರವಾಗಿ’ ಹೊರಹೊಮ್ಮಬೇಕು. ಗೊತ್ತಿಲ್ಲದೇ ಇಂಥ ಮದ್ದು ಸೇವಿಸಿದ ಅಮಾಯಕ ಅಥ್ಲೀಟುಗಳಿಗೆ ಅರಿವು ಮೂಡಿಸುವ ಕೆಲಸವೂ ಆಗಬೇಕು ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.