ADVERTISEMENT

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು

ನಾಗಪುರದ ಮಾಳವಿಕಾ ಬನ್ಸೋಡ್‌ ಅವರನ್ನು ಪರಾಭವಗೊಳಿಸಿದ ತಾರೆ

ಪಿಟಿಐ
Published 14 ಫೆಬ್ರುವರಿ 2019, 18:01 IST
Last Updated 14 ಫೆಬ್ರುವರಿ 2019, 18:01 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಗುವಾಹಟಿ: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದ ಪಿ.ವಿ. ಸಿಂಧು, ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಸಿಂಧು 21–11, 21–13 ನೇರ ಗೇಮ್‌ಗಳಿಂದ ನಾಗಪುರದ ಮಾಳವಿಕಾ ಬನ್ಸೋಡ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿರುವ ಸಿಂಧು, ಎರಡು ಗೇಮ್‌ಗಳಲ್ಲೂ ಪ್ರಾಬಲ್ಯ ಮೆರೆದು ಸುಲಭವಾಗಿ ಎದುರಾಳಿಯ ಸವಾಲು ಮೀರಿದರು.

ADVERTISEMENT

ಅಂಗಳ ತೊರೆದ ಸಮೀರ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಗ್ರಶ್ರೇಯಾಂಕದ ಆಟಗಾರ ಸಮೀರ್‌ ವರ್ಮಾ ಗಾಯದ ಕಾರಣ ಅರ್ಧದಲ್ಲೇ ಅಂಗಳದಿಂದ ಹೊರ ನಡೆದರು.

ಆರ್ಯಮನ್‌ ಟಂಡನ್‌ ಎದುರಿನ ಪಂದ್ಯದ ಮೊದಲ ಗೇಮ್‌ನಲ್ಲಿ 21–16ರಿಂದ ಗೆದ್ದ ಸಮೀರ್‌, ಎರಡನೇ ಗೇಮ್‌ನಲ್ಲಿ 1–8ರಿಂದ ಹಿಂದಿದ್ದರು. ಈ ವೇಳೆ ಪಾದದ ನೋವಿನಿಂದ ಬಳಲಿದರು.

ಸೌರಭ್‌ ವರ್ಮಾ, ಲಕ್ಷ್ಯ ಸೇನ್‌, ಕೌಶಲ್‌ ಧರಮ್‌ಮರ್‌, ಹರ್ಷಿಲ್‌ ದಾನಿ ಮತ್ತು ಬೋಧಿತ್‌ ಜೋಶಿ ಅವರೂ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಸೌರಭ್‌ 21–8, 21–15ರಲ್ಲಿ ಕಾರ್ತಿಕ್‌ ಜಿಂದಾಲ್‌ ಎದುರು ಗೆದ್ದರು.

ಲಕ್ಷ್ಯ 21–11, 21–8ರಲ್ಲಿ ಅನ್ಸಲ್‌ ಯಾದವ್‌ ಮೇಲೂ, ಹರ್ಷಿಲ್‌ 21–15, 21–17ರಲ್ಲಿ ಶುಭಂಕರ್‌ ಡೇ ವಿರುದ್ಧವೂ ವಿಜಯಿಯಾದರು.

ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಎಂ.ಆರ್‌.ಅರ್ಜುನ್‌ ಮತ್ತು ಶ್ಲೋಕ್‌ ರಾಮಚಂದ್ರನ್‌ 21–11, 21–18ರಲ್ಲಿ ರೋಹನ್‌ ಕಪೂರ್‌ ಮತ್ತು ಸೌರಭ್‌ ಶರ್ಮಾ ಅವರನ್ನು ಮಣಿಸಿದರು.

ಪ್ರಣವ್‌ ಜೆರ್ರಿ ಚೋಪ್ರಾ ಹಾಗೂ ಚಿರಾಗ್‌ ಶೆಟ್ಟಿ 21–8, 18–21, 22–20ರಲ್ಲಿ ರೂಪೇಶ್ ಕುಮಾರ್‌ ಮತ್ತು ವಿ.ದಿಜು ಎದುರು ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಅರುಣ್‌ ಜಾರ್ಜ್‌ ಮತ್ತು ಸನ್ಯಮ್‌ ಶುಕ್ಲಾ ಹಾಗೂ ಜಿ.ಕೃಷ್ಣ ಪ್ರಸಾದ್‌ ಮತ್ತು ಧ್ರುವ ಕಪಿಲಾ ಅವರೂ ನಾಲ್ಕರ ಘಟ್ಟ ಪ್ರವೇಶಿಸಿದರು.

ಅಂಗಳಕ್ಕಿಳಿಯಲು ಸೈನಾ ನಕಾರ

ಅಸ್ಸಾಂ ಬ್ಯಾಡ್ಮಿಂಟನ್‌ ಅಕಾಡೆಮಿಯ ಕೋರ್ಟ್‌ನ ಗುಣಮಟ್ಟ ಸರಿ ಇಲ್ಲ ಎಂದು ಆರೋಪಿಸಿ ಸೈನಾ ನೆಹ್ವಾಲ್‌ ಅವರು ಶ್ರುತಿ ಮುಂಡಾದ ಎದುರಿನ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯ ಆಡದಿರಲು ನಿರ್ಧರಿಸಿದರು.

ಪಂದ್ಯಕ್ಕೂ ಮುನ್ನ ಅಂಗಳ ಪರಿಶೀಲಿಸಿದ ಸೈನಾ, ಮರದ ನೆಲದ ಹಾಸು ಕಿತ್ತು ಹೋಗಿರುವುದನ್ನು ಕಂಡು ಇದರಲ್ಲಿ ಆಡಲು ಅಸಾಧ್ಯ. ಹೀಗಾಗಿ ಪಂದ್ಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸಂಘಟಕರಿಗೆ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಕಾರ್ಯದರ್ಶಿ ಓಮರ್‌ ರಶೀದ್‌, ಸೈನಾ, ಪರುಪಳ್ಳಿ ಕಶ್ಯಪ್‌ ಮತ್ತು ಬಿ.ಸಾಯಿ ಪ್ರಣೀತ್ ಅವರೊಂದಿಗೆ ಚರ್ಚಿಸಿ ಮೂರು ಅಂಗಳಗಳನ್ನು ಸರಿಪಡಿಸುವ ಭರವಸೆ ನೀಡಿದರು.

‘ಪಂದ್ಯಕ್ಕೂ ಮುನ್ನ ಅಂಗಳ ಪರಿಶೀಲಿಸಿದಾಗ ನೆಲಕ್ಕೆ ಹಾಕಿದ್ದ ಹಲಗೆಗಳು ಕಿತ್ತು ಹೋಗಿರುವುದು ಗಮನಕ್ಕೆ ಬಂತು. ಇದನ್ನು ಸಂಘಟಕರಿಗೆ ತಿಳಿಸಿದಾಗ ಸರಿಪಡಿಸುವ ಭರವಸೆ ನೀಡಿದರು. ಹೀಗಾಗಿ ಸಂಜೆ ಪಂದ್ಯಗಳನ್ನು ಆಡಲು ಒಪ್ಪಿಕೊಂಡೆವು’ ಎಂದು ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್‌ ತಿಳಿಸಿದರು.

‘ನೆಲ ಹಾಸು ಕಿತ್ತು ಹೋಗಿರುವುದನ್ನು ಆಟಗಾರರು ನಮ್ಮ ಗಮನಕ್ಕೆ ತಂದರು. ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಟೂರ್ನಿ ಸರಾಗವಾಗಿ ನಡೆಯಲಿ ಎಂಬ ಉದ್ದೇಶದಿಂದ ತರುಣ್‌ ರಾಮ್‌ ಫೂಖಾನ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ರಶೀದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.