ಮಂಗಳೂರು: ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆಯ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ, ಲಕ್ಷಿತ್ ಬಿ.ಸಾಲಿಯಾನ್ ಮತ್ತು ರುದ್ರಾ ರಾಜೀವ ಅವರು ಕ್ಲಾಸಿಕಲ್ ರೇಟೆಡ್ ರಾಷ್ಟ್ರೀಯ ಮುಕ್ತ ಚೆಸ್ ಟೂರ್ನಿಯ ಆರು ಸುತ್ತುಗಳ ಕೊನೆಯಲ್ಲಿ ತಲಾ 5.5 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನಗಳನ್ನು ಹಂಚಿಕೊಂಡರು.
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿರುವ ಟೂರ್ನಿಯ ಮೂರನೇ ದಿನವಾದ ಸೋಮವಾರ ಪ್ರಮುಖರು ನಿರಾಸೆ ಕಂಡರು. ಅಗ್ರ ಶ್ರೇಯಾಂಕಿತ, ತಮಿಳುನಾಡಿನ ಶ್ಯಾಮ್ ಸೇರಿದಂತೆ ಒಟ್ಟು 16 ಮಂದಿ 5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
2122 ರೇಟಿಂಗ್ ಹೊಂದಿರುವ ಶ್ಯಾಮ್ ವಿರುದ್ಧ 1812 ರೇಟಿಂಗ್‌ನ ಆರುಷಿ ಸಿಲ್ವಾ ಐದನೇ ಸುತ್ತಿನಲ್ಲಿ ಡ್ರಾ ಸಾಧಿಸಿ ಗಮನ ಸೆಳೆದರು. ಆರನೇ ಸುತ್ತಿನಲ್ಲಿ ಕೇರಳದ ಸ್ಯಾಮ್ಯುಯೆಲ್ ಅಜಿತ್ ವಿರುದ್ಧ ಜಯ ಗಳಿಸಿದರು. ಐದನೇ ಸುತ್ತಿನಲ್ಲಿ ಲಕ್ಷಿತ್ ಕೂಡ ಅಮೋಘ ಆಟವಾಡಿದರು. 1721 ರೇಟಿಂಗ್ ಪಾಯಿಂಟ್‌ಗಳಿರುವ ಅವರ ತಂತ್ರಗಳ ಎದುರು ಡಿಫೆನ್ಸ್ ಅಕೌಂಟ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಅಜಿತ್ ತಿವಾರಿ (1978) ನಿರುತ್ತರರಾಗಿ ಡ್ರಾಗೆ ಸಮಾಧಾನಪಟ್ಟರು. ಆರನೇ ಸುತ್ತಿನಲ್ಲೂ ಲಕ್ಷಿತ್ ತಮಗಿಂತ ಹೆಚ್ಚು ರೇಟಿಂಗ್ ಹೊಂದಿರುವ ಆಟಗಾರನ ಸವಾಲು ಮೀರಿದರು. ದಕ್ಷಿಣ ಕನ್ನಡದ ಆರುಷ್ ಭಟ್ (1825) ವಿರುದ್ಧ ಅವರು ಜಯಭೇರಿ ಮೊಳಗಿಸಿದರು.
ಭಾನುವಾರ ಸಂಜೆ 3.5 ಪಾಯಿಂಟ್ ಗಳಿಸಿದ್ದ ರುದ್ರಾ ರಾಜೀವ್ ಸೋಮವಾರ ಎರಡೂ ಸುತ್ತುಗಳಲ್ಲಿ ಗೆಲುವು ಸಾಧಿಸಿದರು. ಬೆಳಿಗ್ಗೆ ಕೇರಳದ ನೀರದ್ ಪಿ ವಿರುದ್ಧ ಗೆದ್ದ ಅವರು ಸಂಜೆ ತಮಿಳುನಾಡಿನ ರಕ್ಷಿತ್ ಎಂ ಅವರನ್ನು ಮಣಿಸಿದರು.
ಕೊನೆಯ ದಿನ ಎರಡು ಸುತ್ತುಗಳು ಇದ್ದು ಬೆಳಿಗ್ಗೆ ಆರುಷಿ ಡಿಸಿಲ್ವಾ ಮತ್ತು ಲಕ್ಷಿತ್ ನಡುವಿನ ಹೋರಾಟ ಕುತೂಹಲ ಕೆರಳಿಸಿದೆ. ರುದ್ರ ರಾಜೀವ್‌ಗೆ ಶ್ಯಾಮ್ ಅವರ ಸವಾಲು ಎದುರಾಗಿದೆ.
ಪ್ರಮುಖ ಫಲಿತಾಂಶಗಳು: 5ನೇ ಸುತ್ತು: ಆರುಷಿ ಸೆವೆರಿನ್ ಡಿಸಿಲ್ವಾ ಮತ್ತು ಶ್ಯಾಮ್ ಆರ್, ಅಜಯ್ ಕುಮಾರ್ ರೈ ಮತ್ತು ನಿರಂಜನ್ ವಾರಿಯರ್, ಆರುಷ್ ಭಟ್ ಮತ್ತು ನಿಶಾಂತ್ ಡಿಸೋಜ, ಪ್ರದೀಪ್ ತಿವಾರಿ ಮತ್ತು ಲಕ್ಷಿತ್ ಬಿ.ಸಾಲಿಯಾನ್, ರವಿಗೋಪಾಲ್ ಹೆಗ್ಡೆ ಮತ್ತು ಪುನೀತ್ ನೀಲಿ, ರಜಸ್ ದಹಲೆ, ದರ್ಶನ್ ಭಟ್, ಕೃಪೇಶ್ ಮತ್ತು ಹರ್ಷಿಲ್ ಮಿಶ್ರಾ, ಹಿಂದೋಳ್ ಘೋಷ್ ಮತ್ತು ಸಂದೀಪ್ ಸಂತೋಷ್ ನಡುವಿನ ಪಂದ್ಯ ಡ್ರಾ; ರಕ್ಷಿತ್‌ಗೆ ಜೋಶುವಾ ಮಾರ್ಕ್ ಟೆಲಿಸ್ ವಿರುದ್ಧ ಜಯ; ರುದ್ರಾ ರಾಜೀವ್‌ಗೆ ನೀರದ್ ಪಿ ವಿರುದ್ಧ.
6ನೇ ಸುತ್ತು: ಶ್ಯಾಮ್ ಆರ್ ಮತ್ತು ಅಜಯ್ ಕುಮಾರ್ ರೈ, ನಿರಂಜನ್ ವಾರಿಯರ್ ಮತ್ತು ನಿಶಾಂತ್ ಡಿಸೋಜ, ವಿಹಾನ್ ತಾರಿ ಮತ್ತು ಅನೀಶ್ ಅಡಿಗ ನಡುವಿನ ಪಂದ್ಯ ಡ್ರಾ; ಆರುಷಿ ಡಿಸಿಲ್ವಾಗೆ ಸ್ಯಾಮುಯೆಲ್ ಅಜಿತ್ ವಿರುದ್ಧ, ಲಕ್ಷಿತ್ ಸಾಲಿಯಾನ್‌ಗೆ ಆರುಷ್ ಭಟ್ ಎದುರು, ರುದ್ರಾ ರಾಜೀವ್‌ಗೆ ರಕ್ಷಿತ್ ಎಂ ವಿರುದ್ಧ, ಪ್ರದೀಪ್ ತಿವಾರಿಗೆ ಆರ್ಥ್ ಸಿದ್ದೇಶ್ ಶೇಣವಿ ವಿರುದ್ಧ, ರವಿಗೋಪಾಲ್ ಹೆಗ್ಡೆಗೆ ದರ್ಶನ್ ಭಟ್ ವಿರುದ್ಧ, ಹರ್ಮನ್ ಡಯಾನ್‌ಗೆ ಮಾಧವ ಕೃಷ್ಣನ್ ಆರ್ ವಿರುದ್ಧ, ದರ್ಶ್ ಶೆಟ್ಟಿಗೆ ಹರ್ಷಿಲ್ ಮಿಶ್ರಾ ಎದುರು ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.