ADVERTISEMENT

ರಾಷ್ಟ್ರೀಯ ಕ್ರೀಡಾಕೂಟ| ಈಜುಕೊಳದಲ್ಲಿ ನಾಲ್ಕು ದಾಖಲೆ: ಕರ್ನಾಟಕ ಸ್ಪರ್ಧಿಗಳ ಮಿಂಚು

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕ ಸ್ಪರ್ಧಿಗಳ ಮಿಂಚು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 15:45 IST
Last Updated 2 ಅಕ್ಟೋಬರ್ 2022, 15:45 IST
ಹಷಿಕಾ ರಾಮಚಂದ್ರ
ಹಷಿಕಾ ರಾಮಚಂದ್ರ   

ಬೆಂಗಳೂರು: ಕರ್ನಾಟಕದ ಈಜುಪಟುಗಳು ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾನುವಾರ ಮಿಂಚು ಹರಿಸಿದರು.

ರಾಜ್‌ಕೋಟ್‌ನ ಸರ್ದಾರ್‌ ಪಟೇಲ್‌ ಈಜು ಕಾಂಪ್ಲೆಕ್ಸ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ನಾಲ್ಕು ಕೂಟ ದಾಖಲೆಯೊಂದಿಗೆ, ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗಳಿಸಿದರು.

ಪುರುಷರ 200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಅನೀಶ್ ಎಸ್‌. ಗೌಡ 1 ನಿಮಿಷ 51.88 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರು. ಇದರೊಂದಿಗೆ ಈ ಹಿಂದೆ ಕೇರಳದ ಆ್ಯರನ್ ಡಿಸೋಜಾ (1 ನಿ. 52.06 ಸೆ.) ನಿರ್ಮಿಸಿದ್ದ ದಾಖಲೆಯನ್ನು ಮೀರಿದರು.

ADVERTISEMENT

ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಹಷಿಕಾ ರಾಮಚಂದ್ರ 2 ನಿ. 7.8 ಸೆಕೆಂಡುಗಳ ಸಾಧನೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಅವರು ಕೇರಳದ ಶಿವಾನಿ ಕಟಾರಿಯಾ (2 ನಿ. 7.46 ಸೆ.) ಅವರ ದಾಖಲೆಯನ್ನು ಮುರಿದರು. ಈ ವಿಭಾಗದಲ್ಲಿ ಕರ್ನಾಟಕದ ಧೀನಿಧಿ ದೇಸಿಂಗು ಬೆಳ್ಳಿ ಜಯಿಸಿದರು.

ಮಹಿಳೆಯರ 100 ಮೀ. ಬಟರ್‌ಫ್ಲೈನಲ್ಲಿ ಅಸ್ಸಾಂನ ಆಸ್ಥಾ ಚೌಧರಿ (1 ನಿ. 3.37ಸೆ.) ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡು ಚಿನ್ನಕ್ಕೆ ಕೊರಳೊಡ್ಡಿದರು. ಕರ್ನಾಟಕದ ತನಿಶಿ ಗುಪ್ತಾ ಮತ್ತು ನೀನಾ ವೆಂಕಟೇಶ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಒಡತಿಯರಾದರು.

ಪುರುಷರ 4X100 ಮೀ. ಫ್ರೀಸ್ಟೈಲ್‌ ಕರ್ನಾಟಕದ ಅನೀಶ್, ಸಂಭವ್ ಆರ್‌, ಪೃಥ್ವಿ ಎಂ. ಮತ್ತು ಶ್ರೀಹರಿ ನಟರಾಜ್ ಅವರಿದ್ದ ತಂಡ (3 ನಿ. 27.32 ಸೆ.) ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲೂ ರಾಜ್ಯ ತಂಡ ಅಗ್ರಸ್ಥಾನ ಗಳಿಸುವುದರೊಂದಿಗೆ ಕೂಟ ದಾಖಲೆ ಬರೆಯಿತು. ರಿಧಿಮಾ ವೀರೇಂದ್ರ ಕುಮಾರ್, ರುಜುಲಾ ಎಸ್‌, ಲಿತೇಶಾ ಮಂದಣ್ಣ ಮತ್ತು ನೀನಾ ವೆಂಕಟೇಶ್ ಅವರನ್ನೊಳಗೊಂಡ ತಂಡವು 4 ನಿ. 3.10 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ಅಥ್ಲೆಟಿಕ್ಸ್‌ನಲ್ಲಿ ಕಂಚು: ಗಾಂಧಿನಗರದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ಸ್ಪರ್ಧೆಗಳ ಮಹಿಳೆಯರ 4X400 ಮೀ. ರಿಲೇಯಲ್ಲಿ ಕರ್ನಾಟಕ ಕಂಚು ಜಯಿಸಿತು. ಸಿಂಚಲ್ ಕಾವೇರಮ್ಮ, ಇಂಚರ ಎನ್‌.ಎಸ್‌, ವಿಜಯಕುಮಾರಿ ಜಿ.ಕೆ. ಲಿಖಿತಾ ಎಂ ಅವರನ್ನೊಳಗೊಂಡ ತಂಡ 3 ನಿ. 36.50 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಈ ವಿಭಾಗದಲ್ಲಿ ತಮಿಳುನಾಡು ಚಿನ್ನ ಮತ್ತು ಹರಿಯಾಣ ಬೆಳ್ಳಿ ಜಯಿಸಿತು.

ಸೆಮಿಫೈನಲ್‌ಗೆ ಶರ್ಮದಾ– ಪ್ರಜ್ವಲ್‌: ಕರ್ನಾಟಕದ ಶರ್ಮದಾ ಬಾಲು ಮತ್ತು ಎಸ್‌.ಡಿ. ಪ್ರಜ್ವಲ್ ದೇವ್ ಜೋಡಿಯು ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿತು. ಕ್ವಾರ್ಟರ್‌ಫೈನಲ್‌ನಲ್ಲಿ ಶರ್ಮದಾ– ಪ್ರಜ್ವಲ್‌5-7, 6-3, 10-1ರಿಂದ ದೆಹಲಿಯ ಕಶಿಶ್ ಭಾಟಿಯಾ– ರಿಕಿ ಚೌಹಾರಿ ಎದುರು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.